ಕುಲ್ಗಾಂ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರ ವಲಯ ಪೊಲೀಸರು ಇದನ್ನು ಖಚಿತಪಡಿಸಿದಂತೆ ಉಗ್ರರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಕಾಶ್ಮೀರ ವಲಯ ಪೊಲೀಸರು, ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೂ ಇಬ್ಬರು ಉಗ್ರರ ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಗುರುತನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ. ಹೆಚ್ಚಿನ ವಿವರ ತಿಳಿದುಬರಬೇಕಾಗಿದೆ ಎಂದು ಹೇಳಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಾಂನ ರೆಡ್ವಾನಿ ಪಯೀನ್ ಪ್ರದೇಶದಲ್ಲಿ ಇಂದು ಮುಂಜಾನೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಆದಾಗ್ಯೂ, ಪೊಂಚ್ ದಾಳಿ ಹಿಂದಿರುವ ಉಗ್ರರು ಗುಂಡಿನ ದಾಳಿಯಲ್ಲಿ ತೊಡಗಿರುವರೇ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ತಿಳಿದುಬಂದಿಲ್ಲ.
ಮೇ 4 ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿಯಾಚೆಯಿಂದ ಬಂದ ಶಂಕಿತ ಉಗ್ರರು ಭಾರತೀಯ ವಾಯುಪಡೆ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದರು. ನಾಲ್ವರು ಗಾಯಗೊಂಡಿದ್ದರು. ಈ ದಾಳಿಯ ನಂತರ ಕೇಂದ್ರಾಡಳಿತ ಪ್ರದೇಶದಾದ್ಯಂತ ಭಾರಿ ಭದ್ರತೆ ಕಲ್ಪಿಸಲಾಗಿದೆ.