ನಂದೂರ್‌ಬಾರ್: ಜೂನ್ 4 ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ "ನಕಲಿ ಎನ್‌ಸಿಪಿ ಮತ್ತು ಶಿವಸೇನೆ" ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಮನಸ್ಸು ಮಾಡಿವೆ, ಆದರೆ ಅಲ್ಲಿ ಕಾಂಗ್ರೆಸ್ ಜೊತೆ ವಿಲೀನವಾಗುವ ಬದಲು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಜೊತೆ ಸೇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ 40-50 ವರ್ಷಗಳಿಂದ ಸಕ್ರಿಯವಾಗಿರುವ ಇಲ್ಲಿನ ದೊಡ್ಡ ನಾಯಕರೊಬ್ಬರು ಬಾರಾಮತಿ ಲೋಕಸಭಾ ಸ್ಥಾನದ ಚುನಾವಣೆ ನಂತರ ಚಿಂತಿತರಾಗಿದ್ದಾರೆ. ಅವರು ಜೂನ್ 4 ರ ನಂತರ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನೊಂದಿಗೆ ವಿಲೀನವಾಗಲು ನೋಡುತ್ತಿದ್ದಾರೆ ಎಂದು ಶರದ್ ಪವಾರ್ ಹೆಸರು ಹೇಳದೆಯೇ ಪ್ರಧಾನಿ ಪ್ರಸ್ತಾಪಿಸಿದ್ದಾರೆ.
ಇದರರ್ಥ ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲು ಮನಸ್ಸು ಮಾಡಿದೆ ಎಂದು ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಇಂದು ಪ್ರಧಾನ ಮಂತ್ರಿಗಳು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ರ್ಯಾಲಿಯಲ್ಲಿ ಮಾತನಾಡಿದ ಮೋದಿ ಹಿಂದೂ ನಂಬಿಕೆಯನ್ನು ಕೊನೆಗೊಳಿಸಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು. ರಾಮ ಮಂದಿರ ಮತ್ತು ರಾಮನವಮಿ ಉತ್ಸವಗಳು ಭಾರತದ ಕಲ್ಪನೆಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್‌ನ ಶೆಹಜಾದ ಗುರು ಹೇಳಿದ್ದನ್ನು ಪ್ರಸ್ತಾಪಿಸಿದರು.
ಮೊಘಲ್ ದೊರೆ ಔರಂಗಜೇಬನಂತೆ ಮಹಾರಾಷ್ಟ್ರದಲ್ಲಿ ಸಮಾಧಿ ಮಾಡಲಾಗುತ್ತಿದ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಮೋದಿ, ನಕಲಿ ಶಿವಸೇನೆಯವರು ಜೀವಂತ ಸಮಾಧಿ ಮಾಡುವ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನಕಲಿ ಶಿವಸೇನೆಯು ನನ್ನನ್ನು ಜೀವಂತ ಸಮಾಧಿ ಮಾಡಲು ಬಯಸುತ್ತದೆ. ಅವರು ತಮ್ಮ ನೆಚ್ಚಿನ ಮತ ಬ್ಯಾಂಕ್‌ಗೆ ಇಷ್ಟವಾಗುವ ರೀತಿಯಲ್ಲಿ ನನ್ನನ್ನು ನಿಂದಿಸುತ್ತಾರ. ಧರ್ಮದ ಆಧಾರದ ಮೇಲೆ ಕೋಟಾ ಪ್ರಯೋಜನಗಳನ್ನು ನೀಡುವುದು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಮೋದಿ ಬದುಕಿರುವವರೆಗೂ ದಲಿತರು, ಆದಿವಾಸಿಗಳು, ಒಬಿಸಿಗಳ ಮೀಸಲಾತಿಯನ್ನು ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ನೀಡಲು ಬಿಡುವುದಿಲ್ಲ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.