ಉತ್ತರಾಖಂಡ್: ಉತ್ತರಾಖಂಡ್ ನ ಗರ್ವಾಲ್ ಹಿಮಾಲಯದಲ್ಲಿರುವ ಬದರಿನಾಥ ದೇವಾಲಯ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಚಳಿಗಾಲದ ಋತುವಿನಲ್ಲಿ ಬಂದ್ ಆಗಿದ್ದ ದೇವಾಲಯ ಈಗ ಮತ್ತೆ ಬಾಗಿಲು ತೆರೆದಿದೆ.
ಬದರಿ ಕ್ಷೇತ್ರಕ್ಕೆ ಭಕ್ತರ ಪ್ರವೇಶ ಮುಕ್ತವಾದ ಬಳಿಕ, ಬದರಿನಾಥ್, ಕೇದಾರನಾಥ್, ಯಮುನೋತ್ರಿ ಹಾಗೂ ಗಂಗೋತ್ರಿ ಪ್ರದೇಶಗಳಿಗೆ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ವೇದ ಮಂತ್ರಗಳೊಂದಿಗೆ ಪೂಜೆ ಸಲ್ಲಿಸಿ ದೇವಾಲಯದ ಬಾಗಿಲು ತೆಗೆಯಲಾಗಿದೆ. ಹೂವುಗಳಿಂದ ಅಲಂಕೃತಗೊಂಡಿದ್ದ ದೇವಾಲಯದ ಆವರಣದಲ್ಲಿ ಮಳೆಯ ನಡುವೆಯೂ ಭಕ್ತರು ಸಮಾರಂಭವನ್ನು ವೀಕ್ಷಿಸಲು ಜಮಾಯಿಸಿದ್ದರು. ಮುಂಜಾನೆ 4 ಗಂಟೆಗೆ ಬಾಗಿಲು ತೆರೆಯುವ ಪ್ರಕ್ರಿಯೆ ಆರಂಭವಾಯಿತು.
ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜನತೆಗೆ ಶುಭಾಶಯ ಕೋರಿದರು.
ಶುಕ್ರವಾರ ಅಕ್ಷಯ ತೃತೀಯ ಸಂದರ್ಭದಲ್ಲಿ ಕೇದಾರನಾಥ, ಯಮ್ಯುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳ ಬಾಗಿಲು ಭಕ್ತರಿಗೆ ತೆರೆಯಲಾಗಿದೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಶನಿವಾರ ಸಂಜೆ 4 ಗಂಟೆಯವರೆಗೆ, 7,37,885 ಜನರು ಬದರಿನಾಥ ದರ್ಶನಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 18,39,591 ಮಂದಿ ದೇಗುಲಕ್ಕೆ ಭೇಟಿ ನೀಡಿದ್ದರು.