ಮುಂಬೈ: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂನ್ 4 ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚುಕ್ಕಾಣಿ ಹಿಡಿಯುವುದಿಲ್ಲವಾದ್ದರಿಂದ ದೇಶ ಸೆಪ್ಟೆಂಬರ್ 2025 ರವರೆಗೆ ಕಾಯಬೇಕಾಗಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಹೇಳಿದ್ದಾರೆ.
2025 ರ ಸೆಪ್ಟೆಂಬರ್‌ನಲ್ಲಿ 75 ನೇ ವರ್ಷಕ್ಕೆ ಕಾಲಿಡುತ್ತಿರುವ ಮೋದಿ "ನಿವೃತ್ತಿ" ನಂತರ ಗೃಹ ಸಚಿವ ಅಮಿತ್ ಅವರನ್ನು ಪ್ರಧಾನಿ ಮಾಡಲಿದ್ದಾರೆ ಎಂಬ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿಕೆ ಬೆನ್ನಲ್ಲೇ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. "ಜೂನ್‌ನಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸೆಪ್ಟೆಂಬರ್ 2025 ರವರೆಗೆ ಕಾಯುವ ಅಗತ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿಕೆಗೆ ತರೂರ್ ಪ್ರತಿಕ್ರಿಯಿಸಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರೂರ್, ಪ್ರಧಾನಿ ಮೋದಿ ಸಾರ್ವಜನಿಕ ಭಾಷಣದ ಗುಣಮಟ್ಟವನ್ನು ಕಡಿಮೆ ಮಾಡಿದ್ದಾರೆ ಮತ್ತು ಅವರು ಬಳಸುತ್ತಿರುವ ಭಾಷೆ ದೇಶಕ್ಕೆ ಒಳ್ಳೆಯದಲ್ಲ ಎಂದು ಆರೋಪಿಸಿದರು.
ಈ ವರ್ಷದ ಆರಂಭದಲ್ಲಿ ಅಯೋಧ್ಯೆಯಲ್ಲಿ ಭಗವಾನ್ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ರಾಮನ ಮೇಲೆ ಬಿಜೆಪಿ ಹಕ್ಕುಸ್ವಾಮ್ಯ ಹೊಂದಿಲ್ಲ ಎಂದು ಹೇಳಿದರು.
"ನಾನು ದೇವಸ್ಥಾನಗಳಿಗೆ ಹೋಗುವುದು ಪ್ರಾರ್ಥನೆಗಾಗಿಯೇ ಹೊರತು ರಾಜಕೀಯ ಮಾಡುವುದಕ್ಕಾಗಿ ಅಲ್ಲ. ಅವರು ಅಯೋಧ್ಯೆಯಲ್ಲಿ ನಡೆದ 'ಪ್ರಾಣ ಪ್ರತಿಷ್ಠಾ' ಸಮಾರಂಭವನ್ನು ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ನಾನು ರಾಮನನ್ನು ಬಿಜೆಪಿಗೆ ಒಪ್ಪಿಸಬೇಕೇ?" ಎಂದು ಪ್ರಶ್ನಿಸಿದ ತರೂರ್, ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ, ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ವಿಫಲತೆ ಮತ್ತು ಶೇ. 80 ರಷ್ಟು ಜನರ ಆದಾಯ ಕುಸಿತದಂತಹ ವಿಷಯಗಳ ಬಗ್ಗೆ ಮಹತ್ವದ ಸಂವಾದ ನಡೆಸಲು ಬಿಜೆಪಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಮೋದಿಯ ನಿವೃತ್ತಿ ವಯಸ್ಸು" ಕುರಿತು ಕೇಜ್ರಿವಾಲ್ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ತರೂರ್, 'ಬಿಜೆಪಿ ಒಬ್ಬ ವ್ಯಕ್ತಿಗೆ ವಿನಾಯಿತಿ ನೀಡುತ್ತದೆಯೇ? ಎಂದು ಪ್ರಶ್ನಿಸಿದರು. ಏನೇ ಆಗಲಿ ನಾವು ಸೆಪ್ಟೆಂಬರ್ 2025 ರವರೆಗೆ ಕಾಯಬೇಕಾಗಿಲ್ಲ.
ಜೂನ್ 2024 ರ ನಂತರ ಮೋದಿ ಪ್ರಧಾನಿಯಾಗುವುದಿಲ್ಲ ಎಂದು ಹೇಳಿದರು.