ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಂದ ಹಲ್ಲೆ ಪ್ರಕರಣ ಕುರಿತು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಲಿಖಿತ ದೂರು ದಾಖಲಿಸಿದ್ದಾರೆ. ಅವರ ಹೇಳಿಕೆ ದಾಖಲಿಸಿಕೊಳ್ಳಲು ದೆಹಲಿ ಪೊಲೀಸರ ತಂಡ ಗುರುವಾರ ಅವರ ನಿವಾಸಕ್ಕೆ ಭೇಟಿ ನೀಡಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎಸಿಪಿ ಶ್ರೇಣಿಯ ಅಧಿಕಾರಿಯನ್ನೊಳಗೊಂಡ ತಂಡ ವಿವರಗಳನ್ನು ಪಡೆಯಲು ಸುಮಾರು ನಾಲ್ಕು ಗಂಟೆಗಳ ಕಾಲ ಮಲಿವಾಲ್ ನಿವಾಸದಲ್ಲಿ ಕಳೆದಿದೆ ಎನ್ನಲಾಗಿದೆ. ಮಾಜಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಮಲಿವಾಲ್ ಅವರು ಸೋಮವಾರ ನವದೆಹಲಿಯ ಪೊಲೀಸ್ ಠಾಣೆಗೆ ಹೋಗಿ ಕೇಜ್ರಿವಾಲ್ ಅವರ ಆಪ್ತ ಸಿಬ್ಬಂದಿ ಬಿಭವ್ ಕುಮಾರ್, ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ತನ್ನ ಮೇಲೆ "ಹಲ್ಲೆ" ಮಾಡಿದ್ದಾರೆ ಎಂದು ಆರೋಪಿಸಿದರು. ಆದರೆ, ಯಾವುದೇ ಔಪಚಾರಿಕ ದೂರು ದಾಖಲಿಸಿರಲಿಲ್ಲ. ಆರೋಪದ ಒಂದು ದಿನದ ನಂತರ ಎಎಪಿ ಆರೋಪಗಳನ್ನು ದೃಢಪಡಿಸಿದೆ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದೆ. ಎಎಪಿಯ ಹಿರಿಯ ನಾಯಕ ಸಂಜಯ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಘಟನೆಯನ್ನು ಖಂಡಿಸಿದ್ದರು.
ಈ ಮಧ್ಯೆ ರಾಷ್ಟ್ರೀಯ ಮಹಿಳಾ ಆಯೋಗವು ವಿಚಾರಣೆಗಾಗಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಬಿಭವ್ ಕುಮಾರ್‌ಗೆ ಸಮನ್ಸ್ ನೀಡಿದೆ.ಆದರೆ, ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಕುಮಾರ್ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಘಟನೆಯ ಬಗ್ಗೆ ಬಿಜೆಪಿ ನಾಯಕರು ಎಎಪಿ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಬುಧವಾರ ಕೇಜ್ರಿವಾಲ್ ನಿವಾಸದ ಬಳಿ ಕೇಸರಿ ಪಕ್ಷ ಪ್ರತಿಭಟನೆ ನಡೆಸಿತ್ತು.