ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶಕ್ಕೆ ಮರಳಿ ಸೇರ್ಪಡೆಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಗುರುವಾರ ಪುನರುಚ್ಚರಿಸಿದ್ದಾರೆ.
"PoK ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದಕ್ಕೆ ಯಾವುದೇ ಲಕ್ಷ್ಮಣ ರೇಖೆ ಇಲ್ಲ. ಯಾರದೋ ದೌರ್ಬಲ್ಯ ಮತ್ತು ತಪ್ಪಿನಿಂದ ಅದು ತಾತ್ಕಾಲಿಕವಾಗಿ ನಮ್ಮಿಂದ ದೂರವಾಯಿತು. ನಾವು ಒಂದು ದಿನ PoK ಅನ್ನು ಮರಳಿ ಪಡೆಯುತ್ತೇವೆ ಎಂಬ ಸಂಸದೀಯ ನಿರ್ಣಯ ಇದೆ" ಎಂದು ಜೈಶಂಕರ್ ನಾಸಿಕ್‌ನಲ್ಲಿ ಹೇಳಿದ್ದಾರೆ.
"ಪಿಒಕೆಯಲ್ಲಿನ ಜನ, ನಿಯಂತ್ರಣ ರೇಖೆಯಾದ್ಯಂತ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತಿದ್ದಾರೆ. ವಿಷಯ ಹೀಗಿರುವುದರಿಂದ ಅಲ್ಲಿನ ಜನ ನಾವು ಏಕೆ ಬಳಲುತ್ತಿದ್ದೇವೆ ಮತ್ತು ನಾವು ಈ ರೀತಿಯ ದುರ್ವರ್ತನೆಯನ್ನು ಏಕೆ ಒಪ್ಪಿಕೊಳ್ಳಬೇಕು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ ಎಂದು ವಿದೇಶಾಂಗ ಸಚಿವರು ತಿಳಿಸಿದರು.
ಮೇ 10 ರಿಂದ ಮುಜಫರಾಬಾದ್‌ನಲ್ಲಿ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವಿದ್ಯುತ್ ವೆಚ್ಚದ ವಿರುದ್ಧ ಜನರು ಬೀದಿಗಿಳಿದಿದ್ದರಿಂದ ಅಶಾಂತಿ ಮತ್ತು ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದೇ ವೇಳೆ, ಜೈಶಂಕರ್ ಅವರು ಕೆನಡಾದೊಂದಿಗೆ ರಾಜತಾಂತ್ರಿಕವಾಗಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು, ಅಲ್ಲಿ ಸರ್ಕಾರವು ಖಲಿಸ್ತಾನಿ ಪರವಾಗಿ ಕೆಲಸ ಮಾಡುತ್ತಿದೆ ಎಂದರು.