ಅನಂತಪುರ: ನೆರೆಯ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣಾ ರಣಕಣ ರಂಗೇರಿರುವಂತೆಯೇ ಇತ್ತ TDP ಕಾರ್ಯಕರ್ತನೊಬ್ಬ ತನ್ನ ತಾಯಿ YSR Congress ಪಕ್ಷಕ್ಕೆ ಮತ ಹಾಕಿದ ಕಾರಣಕ್ಕೇ ಕೋಪಂದಿಂದ ಕೊಂದು ಹಾಕಿದ್ದಾನೆ.
ಹೌದು.. ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕಂಬದೂರು ಮಂಡಲದ ಉಪರಪಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವಡ್ಡೆ ವೆಂಕಟೇಶುಲು (35) ಎಂಬ ವ್ಯಕ್ತಿ ತನ್ನ ತಾಯಿ ವಡ್ಡೆ ಸುಂಕಮ್ಮ (65) YSR Congress ಪಕ್ಷಕ್ಕೆ ಮತ ಹಾಕಿದ ಕಾರಣಕ್ಕೇ ಕುಡಿದ ಅಮಲಿನಲ್ಲಿ ಕೋಪಂದಿಂದ ಆಕೆಯನ್ನು ಕೊಂದು ಹಾಕಿದ್ದಾನೆ.
ಮೂಲಗಳ ಪ್ರಕಾರ ವಡ್ಡೆ ವೆಂಕಟೇಶುಲು ತೆಲುಗು ದೇಶಂ (TDP) ಪಕ್ಷದ ಕಾರ್ಯಕರ್ತನಾಗಿದ್ದು, ಸೋಮವಾರ ಅಂದರೆ ಮೇ 13ರಂದು ನಡೆದ ಮತದಾನದ ವೇಳೆ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಮನೆಗೆ ಬಂದ ಸುಂಕಮ್ಮ ಮಗನ ಬಳಿ ವೈಸಿಪಿ ಪಕ್ಷಕ್ಕೆ ಮತ ಹಾಕಿರುವುದಾಗಿ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ವೆಂಕಟೇಶುಲು ತನ್ನ ತಾಯಿಯೊಂದಿಗೆ ಜಗಳ ಮಾಡಿದ್ದು, ಈ ವೇಳೆ ನೋಡ ನೋಡುತ್ತಿದ್ದಂತೆಯೇ ಆಕ್ರೋಶದಿಂದ ಕಬ್ಬಿಣದ ಸುತ್ತಿಗೆಯಿಂದ ಆಕೆಯ ತಲೆಗೆ ಬಲವಾಗಿ ಬಡಿದಿದ್ದಾನೆ. ಆಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಳಿಕ ವೆಂಕಟೇಶುಲು ಸ್ಥಳದಿಂದ ಪರಾರಿಯಾಗಿದ್ದಾನೆ.
ನೆರೆಮನೆಯವರು ಮನೆಗೆ ಧಾವಿಸಿದಾಗ ಸುಂಕಮ್ಮ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಕಂಬದೂರು ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ವಡ್ಡೆ ವೆಂಕಟೇಶಲುಗಾಗಿ ಪೊಲೀಸರು ಬಲೆ ಬೀಸಿದ್ದಾರೆ.