ಚೆನ್ನೈ: ಜಲಪಾತ ವೀಕ್ಷಣೆಗೆ ಬಂದಿದ್ದ ವೇಳೆ ದಿಢೀರ್ ಪ್ರವಾಹ ಸಂಭವಿಸಿದ ಪರಿಣಾಮ ಯುವಕನೋರ್ವ ಕೊಚ್ಚಿ ಹೋದ ಘಟನೆ ತಮಿಳುನಾಡಿನ ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಶುಕ್ರವಾರ ಸಂಭವಿಸಿದೆ.
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಖ್ಯಾತ ಪ್ರವಾಸಿ ತಾಣ ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಈ ದುರಂತ ಸಂಭವಿಸಿದ್ದು, ಜಲಪಾತ ನೋಡಲು ಬಂದಿದ್ದ ಸುಮಾರು 17 ವರ್ಷದ ಯುವಕ ಜಲಪಾತದ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಮೂಲಗಳ ಪ್ರಕಾರ ಮನ್ನಾರ್ ಮತ್ತು ಕನ್ಯಾಕುಮಾರಿಯಲ್ಲಿನ ಹವಾಮಾನ ವ್ಯವಸ್ಥೆಯಿಂದ ಉಂಟಾದ ಇತ್ತೀಚಿನ ಮಳೆಯಿಂದಾಗಿ ಕಳೆದೆರಡು ದಿನಗಳಿಂದ ಕುರ್ಟಾಲಂನ ಮುಖ್ಯ ಜಲಪಾತ, ಐದು ಜಲಪಾತಗಳು ಮತ್ತು ಹಳೆಯ ಕುರ್ಟಾಲಂ ಜಲಪಾತಗಳಿಗೆ ನೀರು ಬಂದಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತಿದೆ.
ಇಂದು ಮಧ್ಯಾಹ್ನ 2.30 ರ ಸುಮಾರಿಗೆ, ಪ್ರವಾಸಿಗರ ಗುಂಪೊಂದು ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ, ದಿಢೀರನೆ ಪ್ರವಾಹದ ನೀರು ಜಲಪಾತಕ್ಕೆ ಬಂದಿದ್ದು, ಈ ವೇಳೆ ಅಲ್ಲಿದ್ದವರು ಓಡಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದವರು ಸಹಾಯಕ್ಕಾಗಿ ಕೂಗಿದ್ದು, ಜಲಪಾತದ ಬಳಿ ನಿಯೋಜನೆಗೊಂಡಿದ್ದ ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಅಂಗಡಿಕಾರರು ಪ್ರವಾಸಿಗರ ರಕ್ಷಣೆಗೆ ಧಾವಿಸಿದರು. ಎಲ್ಲರೂ ಜಲಪಾತದ ಬಳಿಯ ಸೇತುವೆ ಹತ್ತಿರಕ್ಕೆ ಬಂದಿದ್ದು, ಕೊನೆಯಲ್ಲಿದ್ದ ಯುವಕ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.
ಪಳಯಂಕೊಟ್ಟೈ ಎನ್‌ಜಿಒ ಕಾಲೋನಿಯ 11ನೇ ತರಗತಿ ವಿದ್ಯಾರ್ಥಿ ಅಶ್ವಿನ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದುಬಂದಿದೆ. ಆತ ತಮ್ಮ ಸಂಬಂಧಿಕರೊಂದಿಗೆ ಕುಟ್ರಾಲಂ ಜಲಪಾತ ವೀಕ್ಷಣೆಗೆ ಬಂದಿದ್ದ. ಜಿಲ್ಲಾಧಿಕಾರಿ ಎ.ಕೆ. ಕಮಲ್ ಕಿಶೋರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಸುರೇಶ್ ಕುಮಾರ್ ಅವರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಯೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಜಲಪಾತದಿಂದ ಸುಮಾರು 500 ಮೀಟರ್ ದೂರದಲ್ಲಿ ಬಂಡೆಗಳ ನಡುವೆ ಸಿಲುಕಿದ್ದ ಅಶ್ವಿನ್ ದೇಹವನ್ನು ಸಂಜೆ 5.10 ಕ್ಕೆ ಹೊರತೆಗೆಯಲಾಯಿತು.