ಪ್ರಯಾಗ್ ರಾಜ್: ಪಕ್ಷದ ಕಾರ್ಯಕರ್ತರ ಗದ್ದಲ, ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡದೆ ಭಾನುವಾರ ನಿರ್ಗಮಿಸಿದರು.
ಭಾರಿ ಜನಸಂದಣಿಯಿಂದ ಕಾಲ್ತುಳಿತದಂತಹ ಪರಿಸ್ಥಿತಿವೇರ್ಪಟ್ಟರಿಂದ ಭದ್ರತೆ ಕಾರಣದಿಂದಾಗಿ ಇಬ್ಬರು ರಾಜಕೀಯ ನಾಯಕರು ಜನರನ್ನುದ್ದೇಶಿಸಿ ಮಾತನಾಡದೆ ಅಲ್ಲಿಂದ ನಿರ್ಗಮಿಸಿದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಫುಲ್‌ಪುರ್ ಲೋಕಸಭಾ ಕ್ಷೇತ್ರ ಪಡಿಲಾದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಮತ್ತು ಎಸ್ಪಿ ಕಾರ್ಯಕರ್ತರು ವೇದಿಕೆ ತಲುಪಲು ಯತ್ನಿಸಿದರು ಎನ್ನಲಾಗಿದೆ.
ಪಕ್ಷದ ಕಾರ್ಯಕರ್ತರನ್ನು ಶಾಂತಗೊಳಿಸಲು ಅಖಿಲೇಶ್ ಮತ್ತು ರಾಹುಲ್ ಪದೇ ಪದೇ ವಿನಂತಿಸಿದರು ಆದರೆ ಅವರ ಮನವಿಗೆ ಕಿವಿಗೂಡದ ಉದ್ರೇಕಿತ ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು.
ಬಳಿಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ತಮ್ಮ ನಡುವೆ ಸಂಕ್ಷಿಪ್ತ ಚರ್ಚೆ ನಡೆಸಿದ್ದು, ಭದ್ರತೆಯಲ್ಲಿ ಯಾವುದೇ ಲೋಪವನ್ನು ತಪ್ಪಿಸಲು ಸ್ಥಳದಿಂದ ನಿರ್ಗಮಿಸಿದರು.