ಕರ್ನಾಲ್ (ಹರಿಯಾಣ): 2024ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಯಾರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪ್ರಶ್ನಿಸಿದ್ದಾರೆ.
'ಒಂದು ವೇಳೆ ಬಹುಮತದ ಗಡಿ ದಾಟಿದರೆ ಅವರ (ಇಂಡಿಯಾ ಮೈತ್ರಿಕೂಟ) ಪ್ರಧಾನಿ ಯಾರು? ಅದು ಶರದ್ ಪವಾರ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ಅರವಿಂದ ಕೇಜ್ರಿವಾಲ್, ಉದ್ಧವ್ ಠಾಕ್ರೆ? ಅಥವಾ ರಾಹುಲ್ ಗಾಂಧಿಯೇ? ಈ ಜನರಿಗೆ ನಾಯಕರೂ ಇಲ್ಲ, ನೀತಿಗಳೂ ಇಲ್ಲ' ಎಂದು ಹರಿಯಾಣದ ಕರ್ನಾಲ್‌ನಲ್ಲಿ ಪ್ರಚಾರದ ವೇಳೆ ಹೇಳಿದರು.
ಐದು ವರ್ಷಗಳ ಅವಧಿಯಲ್ಲಿ ಇಂಡಿಯಾ ಮೈತ್ರಿಕೂಟವು ವಿವಿಧ ನಾಯಕರನ್ನು ವರ್ಷದ ಅವಧಿಗೆ ಪ್ರಧಾನಿಯನ್ನಾಗಿ ಮಾಡಬಹುದು ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಇದು ಸಣ್ಣದೊಂದು ಅಂಗಡಿಯನ್ನು ನಡೆಸಿದಂತಲ್ಲ. ದೇಶವನ್ನು ಆಳಲು ಈ ವಿಧಾನವು ಸೂಕ್ತವಲ್ಲ. ದೇಶದಲ್ಲಿ ಆಡಳಿತ ನಡೆಸುವುದು ಎಂದರೆ ಯಾವುದೋ ಅಂಗಡಿಯನ್ನು ನಡೆಸಿದಂತಲ್ಲ, ಇದು 130 ಕೋಟಿ ಜನರನ್ನು ಹೊಂದಿರುವ ದೇಶವನ್ನು ಮುನ್ನಡೆಸುವುದು ಎಂಬುದು ರಾಹುಲ್ ಬಾಬಾ ಅವರಿಗೆ ಅರ್ಥವಾದಂತಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಲ್ಲೇಖಿಸಿ ಮತ್ತು ಬಿಜೆಪಿಯ ಆದ್ಯತೆಗಳನ್ನು ಪಟ್ಟಿ ಮಾಡಿದ ಶಾ, 'ಇಲ್ಲಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುವ, ಕೋವಿಡ್ ಸಮಯದಲ್ಲಿ ದೇಶವನ್ನು ಸುರಕ್ಷಿತವಾಗಿರಿಸುವ, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಮರಳಿ ತರುವ, ತ್ರಿವಳಿ ತಲಾಖ್ ರದ್ದುಪಡಿಸುವ, ನಕ್ಸಲಿಸಂ ನಿರ್ಮೂಲನೆ ಮಾಡುವ, ಯುಸಿಸಿ ಜಾರಿಗೆ ತರುವ, ಭಾರತವನ್ನು ವಿಶ್ವದ ಅಗ್ರ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿಯ ಅಗತ್ಯವಿದೆ ಎಂದು ಹೇಳಿದರು.
ಇಂದು 'ಮೋದಿ ಮೋದಿ' ಘೋಷಣೆಗಳು ದೇಶದ ಅಭಿವೃದ್ಧಿಯಲ್ಲಿ ಜನರ ನಂಬಿಕೆಯಾಗಿ ಮಾರ್ಪಟ್ಟಿವೆ. ಪ್ರಧಾನಿ ಮೋದಿ ಮಾತ್ರ ದೇಶವನ್ನು ಸಂಪೂರ್ಣ ಅಭಿವೃದ್ಧಿ ಮತ್ತು ಸ್ವತಂತ್ರ, ಸುರಕ್ಷಿತ ಮತ್ತು ಶ್ರೀಮಂತ, ಶಿಕ್ಷಣ ಮತ್ತು ತಂತ್ರಜ್ಞಾನದೊಂದಿಗೆ ಸುಸಜ್ಜಿತವಾಗಿಡಲು ಸಾಧ್ಯ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಶಾ ಹೇಳಿದರು.
ಪ್ರಧಾನಿಗೆ ಹರಿಯಾಣದ ಬಗ್ಗೆ ವಿಶೇಷ ಬಾಂಧವ್ಯವಿದೆ ಎಂದು ತಿಳಿಸಿದ ಶಾ, ಹರಿಯಾಣದ ಜನತೆಗೆ ಪ್ರಧಾನಿ ಮೋದಿಯವರ ಮೇಲೆ ಹಕ್ಕಿದೆ. ನಾನು ಪ್ರಧಾನಿ ಮೋದಿಯವರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅವರು ಗುಜರಾತ್‌ನಲ್ಲಿದ್ದಾಗಲೂ ಹರಿಯಾಣದ ಬಗ್ಗೆ ಚಿಂತಿಸುತ್ತಿದ್ದರು ಮತ್ತು ಅವರು ಈಗ ಇಲ್ಲಿದ್ದಾರೆ (ದೆಹಲಿ). ಹರಿಯಾಣದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಮೋದಿ ಜಿ ಹರಿಯಾಣದ ಬಗ್ಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದಾರೆ ಎಂದರು.