ನವದೆಹಲಿ: ತಮಿಳು ನಾಡಿಗೆ ಮತ್ತೆ 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಮಂಗಳವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ನಿರ್ದೇಶನ ನೀಡಿದೆ. ಇಂದು ಮಂಗಳವಾರ ನಡೆಸಿದ ಸಭೆಯಲ್ಲಿ ಪ್ರಾಧಿಕಾರ, ಮೇ ತಿಂಗಳ ಭಾಗವಾಗಿ 2.5 ಟಿಎಂಸಿ ಹರಿಸಲು ನಿರ್ದೇಶನ ನೀಡಿದೆ. ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯೂ 2.5 ಟಿಎಂಸಿ ನೀರು ಹರಿಸಲು ಶಿಫಾರಸು ಮಾಡಿತ್ತು.
ರಾಜ್ಯದ ಹಲವೆಡೆ ಪೂರ್ವ ಮುಂಗಾರು ಮಳೆಯಾಗುತ್ತಿದೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ಮಳೆ ಹೆಚ್ಚಾಗಿದ್ದು, ಕಾವೇರಿ ಒಡಲಿಗೆ ಜೀವಕಳೆ ಬಂದಿದೆ. ಪರಿಣಾಮ ಕೆಆರ್‌ಎಸ್ ಅಣೆಕಟ್ಟು ಒಳ ಹರಿವು ಹೆಚ್ಚಾಗಿದೆ. ಕಳೆದೊಂದು ವಾರದಲ್ಲಿ 1 ಟಿಎಂಸಿಯಷ್ಟು ನೀರು ಕನ್ನಂಬಾಡಿ ಕಟ್ಟೆ ಸೇರಿದೆ. ಇದೀಗ ಮುಂಗಾರು ಪೂರ್ವದಲ್ಲಿ ಆದೇಶ ಹೊರಬಿದ್ದಿದೆ.
ತಮಿಳು ನಾಡು ವಾದ: ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಸಾಕಷ್ಟು ನೀರಿದೆ. ಕರ್ನಾಟಕದ ಅಗತ್ಯತೆಗಳಿಗೆ ಸದ್ಯ 4 ಟಿಎಂಸಿ ನೀರು ಸಾಕು. ಮುಖ್ಯ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದೆ. ಹೀಗಾಗಿ ಕರ್ನಾಟಕ ತಮಿಳು ನಾಡಿಗೆ ನೀರು ಹರಿಸಬೇಕು. ನೀರು ಬಿಡಲು ಅವರಿಗೆ ಯಾವುದೇ ತೊಂದರೆ ಇಲ್ಲ. ಈ ವರ್ಷ ಸಾಕಷ್ಟು ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಸದ್ಯಕ್ಕೆ ಆರು ಟಿಎಂಸಿ ನೀರನ್ನು ತಕ್ಷಣವೇ ಬಿಡಬೇಕು ಎಂದು ತಮಿಳು ನಾಡು ಸಿಡಬ್ಲ್ಯುಎಂಎ ಸಭೆಯಲ್ಲಿ ವಾದ ಮಂಡಿಸಿತ್ತು.
ಕರ್ನಾಟಕದ ವಾದವೇನು?: ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜಲಾಶಯಗಳಲ್ಲಿ ನೀರಿಲ್ಲದೆ ಬರಿದಾಗಿದ್ದು, ಕುಡಿಯುವ ನೀರಿಗೆ ನಮ್ಮಲ್ಲಿನ ನೀರು ಸಾಕಾಗುತ್ತಿಲ್ಲ. ಇರುವ ನೀರನ್ನು ಸಂಪೂರ್ಣ ಬಳಸಿಕೊಳ್ಳಲು ಆಗುವುದಿಲ್ಲ, ಮುಂಗಾರು ಸಾಮಾನ್ಯವಾಗಿದ್ದರೆ ಮಾತ್ರ ನೀರು ಬಿಡಬಹುದು. ಇಲ್ಲದಿದ್ದರೆ ನೀರು ಬಿಡುವುದಕ್ಕೆ ಸಾಧ್ಯವೆ ಇಲ್ಲ ಎಂದು ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕ ವಾದ ಮಂಡಿಸಿದೆ.