ನವದೆಹಲಿ: ಲೋಕಸಭೆ ಚುನಾವಣೆ ವೇಳೆ ಮಾದರಿ ಸಂಹಿತೆಯನ್ನು ಉಲ್ಲಂಘಿಸಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸದಂತೆ ಏಕಸದಸ್ಯ ಪೀಠ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಕೆವಿ ವಿಶ್ವನಾಥನ್ ಅವರ ರಜಾಕಾಲದ ಪೀಠವು, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. 'ಪ್ರಾಥಮಿಕವಾಗಿ, ಬಿಜೆಪಿ ನೀಡಿರುವ ಜಾಹೀರಾತು ಅವಹೇಳನಕಾರಿಯಾಗಿದೆ' ಎಂದು ಪೀಠ ಹೇಳಿದೆ.
ಬಿಜೆಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಎಸ್ ಪತ್ವಾಲಿಯಾ, ಪೀಠವು ಅರ್ಜಿಯನ್ನು ಅಂಗೀಕರಿಸಲು ನಿರಾಸಕ್ತಿ ವ್ಯಕ್ತಪಡಿಸಿದ ನಂತರ ಪ್ರಕರಣವನ್ನು ಹಿಂಪಡೆಯಲು ಅನುಮತಿ ಕೋರಿದರು. ಅರ್ಜಿಯನ್ನು ಹಿಂಪಡೆದ ಬಳಿಕ ಪ್ರಕರಣವನ್ನು ವಜಾಗೊಳಿಸಲಾಯಿತು.
ಮೇ 22ರಂದು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಯಾವುದೇ ರಾಜಕೀಯ ಪಕ್ಷದ ಮೇಲೆ ವೈಯಕ್ತಿಕ ದಾಳಿ ಸಲ್ಲಲು ಎಂದು ಅಭಿಪ್ರಾಯಪಟ್ಟಿದ್ದ ವಿಭಾಗೀಯ ಪೀಠವು, ಲಕ್ಷ್ಮಣ ರೇಖೆಯನ್ನು ದಾಟಬಾರದು ಎಂದು ಹೇಳಿತ್ತು.
ಮೇ 20ರಂದು ಏಕಸದಸ್ಯ ಪೀಠವು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಜೂನ್ 4 ರವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಿತ್ತು.
ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಮತ್ತು ಅದರ ಕಾರ್ಯಕರ್ತರ ವಿರುದ್ಧ ಅಸಮರ್ಥನೀಯ ಆರೋಪಗಳನ್ನು ಬಿಜೆಪಿ ಮಾಡಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿತ್ತು. ಅಂತಹ ಯಾವುದೇ ಜಾಹೀರಾತುಗಳನ್ನು ಪ್ರಕಟಿಸದಂತೆ ನ್ಯಾಯಾಲಯವು ಬಿಜೆಪಿಗೆ ಆದೇಶಿಸಿತ್ತು.