ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸೇನೆಯ ವಿಶೇಷ ಪಡೆಗಳ ಜೂನಿಯರ್ ಕಮಿಷನ್ಡ್ ಆಫೀಸರ್ ಹುತಾತ್ಮರಾಗಿದ್ದರೆ, ಇನ್ನೂ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗೆ ಇಬ್ಬರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಕೊಂದ ನಂತರ ಗುರುವಾರ ಸಂಜೆಯಿಂದ ಕುಂಟ್ವಾರಾ ಮತ್ತು ಕೇಶ್ವಾನ್ ಅರಣ್ಯಗಳಲ್ಲಿ ಅಡಗಿದ್ದ ಉಗ್ರರಿಗಾಗಿ ನಡೆಯುತ್ತಿದ್ದ ತೀವ್ರ ಶೋಧದ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಹುತಾತ್ಮರಾದ ಅಧಿಕಾರಿಯನ್ನು 2 ಪ್ಯಾರಾದ ನಾಯಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಅವರ ಅತ್ಯುನ್ನತ ತ್ಯಾಗಕ್ಕೆ ಸೇನೆ ನಮನ ಸಲ್ಲಿಸಿದೆ.
ಗ್ರಾಮ ರಕ್ಷಣಾ ಸಿಬ್ಬಂದಿ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಅವರ ಶವಗಳು ಪತ್ತೆಯಾದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕೇಶ್ವಾನ್ ಅರಣ್ಯದಲ್ಲಿ ಸೇನೆ ಮತ್ತು ಪೊಲೀಸರ ಜಂಟಿ ಶೋಧ ತಂಡಗಳು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಅಡಗಿಕೊಂಡಿದ್ದ ಭಯೋತ್ಪಾದಕರನ್ನು ತಡೆದಾಗ ಎನ್‌ಕೌಂಟರ್ ಆರಂಭವಾಯಿತು.
ಗುರುವಾರ ಸಂಜೆ ಕುಂಟ್ವಾರಾ ಮತ್ತು ಕೇಶ್ವಾನ್ ಅರಣ್ಯಗಳಲ್ಲಿ ಉಗ್ರರು ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಅಪಹರಿಸಿ ಕೊಂದ ನಂತರ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.