ರಾಂಚಿ: ಇದೇ 13 ರಿಂದ ನವೆಂಬರ್ 20ರವರೆಗೆ ಎರಡು ಹಂತಗಳಲ್ಲಿ ನಡೆಯಲಿರುವ ಜಾರ್ಖಂಡ್ ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ರಾಂಚಿಯಲ್ಲಿ ರೋಡ್ ಶೋ ನಡೆಸಿದರು.
ಹೂವುಗಳು ಮತ್ತು ಕಟೌಟ್‌ಗಳಿಂದ ಅಲಂಕರಿಸಲ್ಪಟ್ಟ ಕೇಸರಿ ಬಣ್ಣದ ತೆರೆದ ವಾಹನದ ಮೇಲೆ ನಿಂತಿದ್ದ ಪ್ರಧಾನಿ, ರಸ್ತೆಯ ಇಕ್ಕೆಲಗಳಲ್ಲಿ ಸೇರಿ ಘೋಷಣೆ ಕೂಗುತ್ತಿದ್ದ ಜನಸಮೂಹದತ್ತ ಕೈಬೀಸಿದರು. ಇದು ಮೋದಿ ರಾಂಚಿಯಲ್ಲಿ ನಡೆಸಿದ ಎರಡನೇ ರೋಡ್ ಶೋ ಆಗಿದೆ. ಈ ಹಿಂದೆ ಮೇ 3ರಂದು ರೋಡ್ ಶೋ ನಡೆಸಿದ್ದರು.
ಒಟಿಸಿ ಮೈದಾನದಲ್ಲಿ ಬಿಗಿ ಭದ್ರತೆ ಮತ್ತು ಭಾರಿ ಪೊಲೀಸ್ ನಿಯೋಜನೆಯ ನಡುವೆ ಪ್ರಾರಂಭವಾದ ರೋಡ್ ಶೋ ನ್ಯೂ ಮಾರ್ಕೆಟ್ ಚೌಕ್‌ನಲ್ಲಿ ಮುಕ್ತಾಯವಾಯಿತು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಜನರು ತಮ್ಮ ಮೊಬೈಲ್‌ನಲ್ಲಿ ರೋಡ್‌ಶೋ ಕ್ಷಣಗಳನ್ನು ಸೆರೆಹಿಡಿಯುವ ಮೂಲಕ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.
ರೋಡ್‌ಶೋ ಹಿನ್ನೆಲೆಯಲ್ಲಿ ರಾಂಚಿಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 11ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿಯಾಗಿ, ಎಲ್ಲಾ ಸಣ್ಣ ಮತ್ತು ದೊಡ್ಡ ಸರಕು ವಾಹನಗಳ ಪ್ರವೇಶವನ್ನು ರಾಜ್ಯ ರಾಜಧಾನಿಯಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 8 ರ ನಡುವೆ ನಿರ್ಬಂಧಿಸಲಾಗಿದೆ.
ಜಿಲ್ಲಾಡಳಿತ ಬಿರ್ಸಾ ಮುಂಡಾ ವಿಮಾನ ನಿಲ್ದಾಣ ಮತ್ತು ಸಹಜಾನಂದ್ ಚೌಕ್ ನಡುವಿನ 200 ಮೀಟರ್ ವ್ಯಾಪ್ತಿಯೊಳಗೆ ಹಾರಾಟ-ನಿಷೇಧ ವಲಯ ಎಂದು ಘೋಷಿಸಿದೆ. ರೋಡ್ ಶೋ ಅವಧಿಯವರೆಗೆ ಈ ಪ್ರದೇಶದಲ್ಲಿ ಡ್ರೋನ್‌ಗಳು, ಪ್ಯಾರಾಗ್ಲೈಡಿಂಗ್ ಮತ್ತು ಬಿಸಿ ಗಾಳಿಯ ಬಲೂನ್‌ಗಳನ್ನು ನಿಷೇಧಿಸಲಾಗಿದೆ. ರೋಡ್ ಶೋಗೆ ಮುನ್ನಾ ಬೊಕಾರೊ ಮತ್ತು ಗುಮ್ಲಾದಲ್ಲಿ ನಡೆದ ಎರಡು ಚುನಾವಣಾ ರ್‍ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಯ ಭರವಸೆ ನೀಡಿದ್ದರು.