ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಮತ್ತು ಜಾರ್ಖಂಡ್ ನ 38 ವಿಧಾನಸಭಾ ಸ್ಥಾನಗಳಿಗೆ ಎರಡು ಮತ್ತು ಅಂತಿಮ ಹಂತದ ಮತದಾನ ಇಂದು ಬುಧವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಸಾಂಗವಾಗಿ ಮುಂದುವರಿಯುತ್ತಿದೆ. ಮಹಾರಾಷ್ಟ್ರದಲ್ಲಿ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟ (ಬಿಜೆಪಿ-ಶಿವಸೇನೆ-ಎನ್ಸಿಪಿ) ಅಧಿಕಾರವನ್ನು ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದರೆ, ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿ (ಕಾಂಗ್ರೆಸ್-ಶಿವಸೇನೆ (ಯುಬಿಟಿ)-ಎನ್ಸಿಪಿ (ಎಸ್ಪಿ)) ಅಧಿಕ ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿದೆ.
ಎನ್ ಸಿಪಿ- ಎಸ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಾರಾಮತಿಯಲ್ಲಿ ಮತದಾನ ಮಾಡಿದರು.
ಎನ್ ಸಿಪಿ-ಎಸ್ ಸಿಪಿ ಸಂಸದೆ ಸುಪ್ರಿಯಾ ಸುಳೆ ತನ್ನ ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದರು. ಮಹಾರಾಷ್ಟ್ರದಲ್ಲಿ ಮಹಾಯುತಿ (ಬಿಜೆಪಿ- ಶಿವಸೇನಾ-ಎನ್ ಸಿಪಿ) ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರೆ, ಪ್ರತಿಪಕ್ಷ ಮಹಾ ವಿಕಾಸ್ ಆಘಾಡಿ ( ಯುಬಿಟಿ) ಎನ್ ಸಿಪಿ (ಎಸ್ ಪಿ) ಮತ್ತೆ ಕಂಬ್ಯಾಕ್ ಆಗುವ ವಿಶ್ವಾಸದಲ್ಲಿದೆ.
ಈ ಮಧ್ಯೆ ಜಾರ್ಖಂಡ್ ವಿಧಾನಸಭಾ ಕ್ಷೇತ್ರದ 38 ಕ್ಷೇತ್ರಗಳಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಬಿಗಿ ಭದ್ರತೆ ನಡುವೆ ಆರಂಭವಾಗಿದೆ. 12 ಜಿಲ್ಲೆಗಳ 14, 218 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ನವೆಂಬರ್ 13 ರಂದು ಮೊದಲ ಹಂತದ ಮತದಾನ ನಡೆದಿತ್ತು. ಉಭಯ ರಾಜ್ಯಗಳ ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಮಹಾರಾಷ್ಟ್ರದಲ್ಲಿ ಬೆಳಗಿನ ಜಾವ ನೀರಸ ಮತದಾನ: ಮಹಾರಾಷ್ಟ್ರದಲ್ಲಿ ಬೆಳಗ್ಗೆ 9 ಗಂಟೆಗೆ ಕಡಿಮೆ ಮತದಾನವಾಗಿದೆ, ಅದರಲ್ಲೂ ರಾಜಧಾನಿ ಮುಂಬೈ ಹಿಂದುಳಿದಿದೆ.
ರಾಜ್ಯದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯವರೆಗೆ 6.61% ಮತದಾನವಾಗಿದೆ.
ಮೊದಲ ಎರಡು ಗಂಟೆಗಳಲ್ಲಿ ಗಡ್ಚಿರೋಲಿ ಜಿಲ್ಲೆಯಲ್ಲಿ 12.33% ಮತದಾನವಾಗಿದ್ದರೆ, ಜಿಲ್ಲೆಯ ಅರ್ಮೋರಿ ವಿಧಾನಸಭಾ ಕ್ಷೇತ್ರದಲ್ಲಿ 13.53% ಮತದಾನವಾಗಿದೆ.
ಮುಂಬೈ ಉಪನಗರದಲ್ಲಿ ಶೇ.7.88ರಷ್ಟು ಮತದಾನವಾಗಿದೆ. ಭಾಂಡುಪ್ ಮತ್ತು ಮುಲುಂಡ್ ಉಪನಗರಗಳಲ್ಲಿ 10.59% ಮತ್ತು 10.71% ಮತದಾನವಾಗಿದೆ. ಮುಂಬೈ ನಗರದಲ್ಲಿ 6.25% ಮತದಾನ ದಾಖಲಾಗಿದ್ದರೆ, ಕೊಲಾಬಾದಲ್ಲಿ 5.35%, ವರ್ಲಿಯಲ್ಲಿ 3.78% ಮತದಾನವಾಗಿದೆ.
ನಾಗ್ಪುರದಲ್ಲಿ ಮತ ಚಲಾಯಿಸಿದ ಡಿಸಿಎಂ ದೇವೇಂದ್ರ ಫಡ್ನವೀಸ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ನಾಗ್ಪುರದ ಮತಗಟ್ಟೆಯಲ್ಲಿ ಇಂದು ಮತದಾನ ಮಾಡಿದರು.
ಫಡ್ನವಿಸ್ ನಾಗ್ಪುರ ನೈಋತ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ವಸಂತರಾವ್ ನಾಯಕ್ (1967-1972) ನಂತರ ಪೂರ್ಣಾವಧಿಯನ್ನು (2014-2019) ಪೂರ್ಣಗೊಳಿಸಿದ ಮಹಾರಾಷ್ಟ್ರದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.
ಮತದಾನ ಕೇಂದ್ರದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, "ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವನ್ನು ಈಗ ಆಚರಿಸಲಾಗುತ್ತಿದೆ, ನಾನು ಮತ್ತು ನನ್ನ ಕುಟುಂಬ ನಮ್ಮ ಮತವನ್ನು ಚಲಾಯಿಸಿದ್ದೇವೆ. ಮಹಾರಾಷ್ಟ್ರದ ಸಹೋದರ ಸಹೋದರಿಯರಿಗೆ ಮತದಾನ ಮಾಡಲು ನಾನು ಮನವಿ ಮಾಡುತ್ತೇನೆ." ಎಂದಿದ್ದಾರೆ.
ಹಣ ಹಂಚುವಷ್ಟು ಮೂರ್ಖನಲ್ಲ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿಯ ತಾವ್ಡೆ
ಮತದಾರರ ಮೇಲೆ ಪ್ರಭಾವ ಬೀರಲು ಹಣ ಹಂಚಿಕೆ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ನನಗೆ ರೂಲ್ಸ್ ಬಗ್ಗೆ ಚೆನ್ನಾಗಿ ತಿಳಿದಿದೆ. ರಾಜಕೀಯ ವಿರೋಧಿಗಳ ಹೋಟೆಲ್ನಲ್ಲಿ ಇಂತಹ ಚಟುವಟಿಕೆಯಲ್ಲಿ ತೊಡಗುವಷ್ಟು ಮೂರ್ಖನಲ್ಲ ಎಂದು ಹೇಳಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿರುವ ಅವರು, ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
"ವಿವಾಂತ ಹೋಟೆಲ್ (ಪಾಲ್ಘರ್ನ ವಿರಾರ್ನಲ್ಲಿರುವ) ಠಾಕೂರ್ಗಳ ಒಡೆತನದಲ್ಲಿದೆ. ಅವರ ಹೋಟೆಲ್ಗೆ ಹೋಗಿ ಅಲ್ಲಿ ಹಣವನ್ನು ಹಂಚುವಷ್ಟು ಮೂರ್ಖ ನಾನಲ್ಲ ಎಂದು ತಾವ್ಡೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಷ್ಟ್ರೀಯ ನಾಯಕರು ಈ ವಿಚಾರದಲ್ಲಿ ಭಾಗಿಯಾಗಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ ತಾವ್ಡೆ, ‘ಬಿಜೆಪಿಯವರು ವಿರೋಧ ಪಕ್ಷಗಳ ಒಡೆತನದ ಹೋಟೆಲ್ನಲ್ಲಿ ಹಣ ಹಂಚುವ ಮೂರ್ಖರಲ್ಲ, ಇದನ್ನು ವಿರೋಧ ಪಕ್ಷದವರು ಅರಿತುಕೊಳ್ಳಬೇಕು’ ಎಂದರು.
ಮತದಾನ ಮಾಡಿ, ಮಹಾರಾಷ್ಟ್ರದ ಸ್ವಾಭಿಮಾನವನ್ನು ಕಾಪಾಡಿ: ಮತದಾರರಿಗೆ ಉದ್ಧವ್ ಠಾಕ್ರೆ ಮನವಿ
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮುಂಬೈನಲ್ಲಿ ಮತ ಚಲಾಯಿಸಿ "ಮಹಾರಾಷ್ಟ್ರದ ಸ್ವಾಭಿಮಾನವನ್ನು ರಕ್ಷಿಸಲು" ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಹಕ್ಕು ಚಲಾಯಿಸುವಂತೆ ಒತ್ತಾಯಿಸಿದರು.
ಠಾಕ್ರೆ ಅವರು ತಮ್ಮ ಪತ್ನಿ ರಶ್ಮಿ ಮತ್ತು ಮಕ್ಕಳಾದ ಆದಿತ್ಯ ಮತ್ತು ತೇಜಸ್ ಅವರೊಂದಿಗೆ ಬಾಂದ್ರಾ ಪೂರ್ವದಲ್ಲಿ ಮತ ಚಲಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಮಹಾರಾಷ್ಟ್ರದ ಸ್ವಾಭಿಮಾನವನ್ನು ಕಾಪಾಡಿ ಎಂದು ಮಾಜಿ ಮುಖ್ಯಮಂತ್ರಿ ಕೇಳಿಕೊಂಡರು.
ಬಾಂದ್ರಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಠಾಕ್ರೆ ಅವರ ಸೋದರಳಿಯ ವರುಣ್ ಸರ್ದೇಸಾಯಿ ಕಣದಲ್ಲಿದ್ದಾರೆ. ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರಿಗೆ ಮತ ಹಾಕುತ್ತಿರುವುದು ಇದೇ ಮೊದಲು.
ಆದಿತ್ಯ ಠಾಕ್ರೆ ಅವರು ಪ್ರಸ್ತುತ ಪ್ರತಿನಿಧಿಸುತ್ತಿರುವ ನಗರದ ವರ್ಲಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದ್ದಾರೆ.