ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಶನಿವಾರ ತಿರುಪತಿ ತಿರುಮಲ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ದುರಾಡಳಿತವಾಗಿತ್ತು ಎಂದು ಆರೋಪ ಮಾಡಿದ ನಂತರ ಮೊದಲ ಬಾರಿಗೆ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತಿರುಮಲದಲ್ಲಿ ವಕುಲಮಾತಾ ಕೇಂದ್ರೀಕೃತ ಅಡುಗೆಮನೆಯನ್ನು ಉದ್ಘಾಟಿಸಿದರು.
ನಾಯ್ಡು ಅವರು ಹಿಂದೆ ವೈ.ಎಸ್. ಜಗನ್ ಮೋಹನ್ ರೆಡ್ಡಿ, ದೇವಸ್ಥಾನದ ಪ್ರಸಿದ್ಧ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿದ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು ಅದನ್ನು ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ನಿರಾಕರಿಸಿದ್ದರು.
ನಂತರ ಪದ್ಮಾವತಿ ಅತಿಥಿ ಗೃಹದಲ್ಲಿ ಟಿಟಿಡಿ ಅಧಿಕಾರಿಗಳೊಂದಿಗೆ ಚಂದ್ರಬಾಬು ನಾಯ್ಡು ಪರಿಶೀಲನೆ ನಡೆಸಿದರು. ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಉಸ್ತುವಾರಿ ವಹಿಸಿರುವ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ನಾಯ್ಡು ಅವರು ಪ್ರಸಾದ ನೈವೇದ್ಯ ತಯಾರಿಕೆಯಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಿದರು.
ತಿರುಮಲದಲ್ಲಿ ವಿಐಪಿ ಸಂಸ್ಕೃತಿಯನ್ನು ಕಡಿಮೆ ಮಾಡಬೇಕು. ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಯಾವುದೇ ಗದ್ದಲ ಇರಬಾರದು, ದೇವಾಲಯದ ಅಲಂಕಾರಗಳು ಸರಳ ಮತ್ತು ಆಧ್ಯಾತ್ಮಿಕವಾಗಿರಬೇಕು, ಯಾವುದೇ ಪ್ರಚಾರ ಅಥವಾ ಅನಗತ್ಯ ವೆಚ್ಚವನ್ನು ತಪ್ಪಿಸಬೇಕು ಎಂದು ಒತ್ತಿ ಹೇಳಿದರು.
ಟಿಟಿಡಿ ಮಾತ್ರವಲ್ಲದೆ ಎಲ್ಲಾ ದೇವಾಲಯಗಳು ಎಲ್ಲಾ ವಿಷಯಗಳಲ್ಲಿ ಭಕ್ತರ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ದತ್ತಿ ಸಚಿವ ಆನಂ ರಾಂನಾರಾಯಣ ರೆಡ್ಡಿ ಅವರಿಗೆ ಶಿಫಾರಸು ಮಾಡಿದರು.
ತಿರುಮಲ ಬೆಟ್ಟದಲ್ಲಿ ಗೋವಿಂದ ನಾಮವನ್ನು ಹೊರತುಪಡಿಸಿ ಬೇರೆ ಯಾವುದೇ ಪದಗಳು ಕೇಳಿಬರಬಾರದು ಎಂದು ಹೇಳಿದರು. ತಿರುಮಲ ಅರಣ್ಯ ಪ್ರದೇಶವನ್ನು ಶೇ.72ರಿಂದ 80ಕ್ಕೆ ವಿಸ್ತರಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ನಿನ್ನೆ ರಾತ್ರಿಯೇ ತಿರುಪತಿಗೆ ಆಗಮಿಸಿ ತಂಗಿದ್ದರು. ಒಂಬತ್ತು ದಿನಗಳ ವಾರ್ಷಿಕ ಬ್ರಹ್ಮೋತ್ಸವಗಳ ಮೊದಲ ದಿನದಂದು ವೆಂಕಟೇಶ್ವರ ದೇವರಿಗೆ ರಾಜ್ಯ ಸರ್ಕಾರದ ಪರವಾಗಿ ಪಟ್ಟು ವಸ್ತ್ರಗಳನ್ನು (ರೇಷ್ಮೆ ವಸ್ತ್ರ) ಅರ್ಪಿಸಿದರು. 2025 ರ ತಿರುಮಲ ತಿರುಪತಿ ದೇವಸ್ಥಾನದ ಕ್ಯಾಲೆಂಡರ್ ಮತ್ತು ಡೈರಿಯನ್ನು ಮುಖ್ಯಮಂತ್ರಿಗಳು ಅನಾವರಣಗೊಳಿಸಿದರು.