ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಷ್ಯಾ ಹಾಗೂ ಯುಕ್ರೇನ್ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಯುದ್ಧಗ್ರಸ್ತವಾಗಿರುವ ಎರಡು ದೇಶಗಳೊಂದಿಗಿನ ಸಂವನದ ಆರಂಭವಷ್ಟೇ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಸುದ್ದಿ ವಾಹಿನಿ ಪ್ರತಿದಿನ್ ಟೈಮ್ ಆಯೋಜಿಸಿದ ದಿ ಕಾನ್ಕ್ಲೇವ್ 2024 ರ ಸಂವಾದಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿರುವ ಜೈಶಂಕರ್, ಪ್ರಧಾನಿ ಮೋದಿ ತಮ್ಮನ್ನು "ನಂಬುವ" ನಾಯಕರಿಬ್ಬರೊಂದಿಗೆ ಮಾತನಾಡುವ "ಸಾಮರ್ಥ್ಯ" ಹೊಂದಿರುವ ಕೆಲವೇ ಕೆಲವು ವಿಶ್ವ ನಾಯಕರಲ್ಲಿ ಒಬ್ಬರು ಎಂದು ಹೇಳಿದರು.
"ನಾವು ಏನು ಮಾಡಲು ಪ್ರಯತ್ನಿಸುತ್ತಿದ್ದೇವೆ? ಮಧ್ಯಸ್ಥಿಕೆ ವಹಿಸಬೇಕಾಗಿಲ್ಲ. ಕೆಲವೊಮ್ಮೆ ಸಂವಹನ ನಡೆಸಬೇಕು. ನಾವು ವಾಸ್ತವವಾಗಿ ಏಕಕಾಲದಲ್ಲಿ ಸಂಘರ್ಷದಲ್ಲಿರುವ ಎರಡು ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ" ಎಂದು ಅವರು ಉಕ್ರೇನ್ ಸಂಘರ್ಷದಲ್ಲಿ "ಮಧ್ಯಸ್ಥಿಕೆ"ಯಲ್ಲಿ ಭಾರತದ ಪಾತ್ರದ ಕುರಿತು ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಕನಿಷ್ಠ ಮೂರು ಸಭೆಗಳನ್ನು ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಒಂದು ಸಭೆ ನಡೆಸಿದ್ದಾರೆ ಎಂದು ಜೈಶಂಕರ್ ಹೇಳಿದರು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೆಪ್ಟೆಂಬರ್‌ನಲ್ಲಿ ಪುಟಿನ್ ಅವರನ್ನು ಭೇಟಿಯಾಗಿ ಝೆಲೆನ್ಸ್‌ಕಿ ಜೊತೆಗಿನ ಮೋದಿಯವರ ಚರ್ಚೆಗಳ ಬಗ್ಗೆ ವಿವರಿಸಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ.
"ನಿಸ್ಸಂಶಯವಾಗಿ, ಆ ಮಾತುಕತೆಯು ಸಂಘರ್ಷದ ಬಗ್ಗೆ ಕೇಂದ್ರೀಕೃತವಾಗಿದೆ. ಎನ್ಎಸ್ಎ ದೋವಲ್ ರಷ್ಯಾಕ್ಕೆ ಹೋಗುವುದು ಅಗತ್ಯವಾಗಿತ್ತು, ಇದರಿಂದಾಗಿ ಪ್ರಧಾನಿ ಝೆಲೆನ್ಸ್ಕಿಯೊಂದಿಗೆ ಏನು ಮಾತನಾಡಿದರು ಎಂಬುದನ್ನು ರಷ್ಯನ್ನರು ತಿಳಿದುಕೊಳ್ಳುತ್ತಾರೆ" ಎಂದು ಜೈಶಂಕರ್ ಹೇಳಿದರು.
ರಷ್ಯಾ-ಉಕ್ರೇನ್ ಸಂಘರ್ಷ ಮೂರನೇ ವರ್ಷಕ್ಕೆ ಕಾಲಿಟ್ಟಿದೆ ಮತ್ತು ಪ್ರಪಂಚದಾದ್ಯಂತ ಅಗಾಧವಾದ ಮಾನವ ವೆಚ್ಚ ಮತ್ತು ಭಾರೀ ಆರ್ಥಿಕ ಪರಿಣಾಮಗಳನ್ನು ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು. "ಇದು ಸಂವಹನ ಪ್ರಕ್ರಿಯೆಯ ಆರಂಭ ಎಂದು ನಾನು ಭಾವಿಸುತ್ತೇನೆ. ಅದು ಎಲ್ಲಿಗೆ ಕರೆದೊಯ್ಯುತ್ತದೆ, ನಾನು ಆ ಬಗ್ಗೆ ಮಾತನಾಡುವ ಹಂತವನ್ನು ತಲುಪಿಲ್ಲ" ಎಂದು ಜೈಶಂಕರ್ ಹೇಳಿದರು.