ನವದೆಹಲಿ: ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಂಜಯ್ ರಾಯ್ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಕೋಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ, ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಸ್ಥಳೀಯ ಪೊಲೀಸರೊಂದಿಗೆ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ರಾಯ್, ಆಗಸ್ಟ್ 9 ರಂದು ಸಂತ್ರಸ್ತೆ ವೈದ್ಯೆ ವಿರಾಮದ ಸಮಯದಲ್ಲಿ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಮಲಗಲು ಹೋದಾಗ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದೆ.
ಅಧಿಕಾರಿಗಳ ಪ್ರಕಾರ, ಸಾಮೂಹಿಕ ಅತ್ಯಾಚಾರದ ಆರೋಪದ ಬಗ್ಗೆ ಸಿಬಿಐ ಯಾವುದೇ ಉಲ್ಲೇಖ ಮಾಡಿಲ್ಲ. ರಾಯ್ ಒಬ್ಬರೇ ಅತ್ಯಾಚಾರ ಎಸಗಿದ್ದಾರೆ ಸೂಚಿಸಿದೆ.
ಆಗಸ್ಟ್ 9 ರ ಬೆಳಗ್ಗೆ ಸೆಮಿನಾರ್ ಕೋಣೆಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ರಾಯ್ ನನ್ನು ಆಗಸ್ಟ್ 10 ರಂದು ಬಂಧಿಸಿದ್ದರು ಎಂದು ಸಿಬಿಐ ಹೇಳಿದೆ.
ಕೋಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ಆಗಸ್ಟ್ 14 ರಂದು ತನಿಖೆ ಕೈಗೆತ್ತಿಕೊಂಡ ಸಿಬಿಐ, ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿವರವಾದ ವಿಚಾರಣೆ ನಡೆಸಿತು. ನಂತರ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿತು.
ಪ್ರಕರಣದಲ್ಲಿ ತಾಲಾ ಪೊಲೀಸ್ ಠಾಣಾಧಿಕಾರಿ ಅಭಿಜಿತ್ ಮೊಂಡಲ್ ಮತ್ತು ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಹ ಸಿಬಿಐ ಬಂಧಿಸಿದೆ.