ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ ಸರ್ಕಾರ ಅಮೆರಿಕ ಸೇನೆ ಬಳಸುತ್ತಿರುವ ವಿಧ್ವಂಸಕ MQ-9B ಪ್ರಿಡೆಟರ್ ಡ್ರೋನ್ ಗಳನ್ನು ಖರೀದಿ ಮಾಡಲು ನಿರ್ಧರಿಸಿದೆ.
ಹೌದು.. ಭಾರತೀಯ ಸೇನೆಯ ಸಾಮರ್ಥ್ಯ ವೃದ್ದಿಗೆ ಭಾರತ ಸರ್ಕಾರ ಅಮೆರಿಕದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದರಂತೆ ಅಮೆರಿಕ ಸೇನೆ ಬಳಸುತ್ತಿರುವ 31 MQ-9B ಪ್ರಿಡೆಟರ್ ಡ್ರೋನ್ ಗಳ ಖರೀದಿಗೆ ಮುಂದಾಗಿದೆ.
General Atomics Aeronautical Systems ಸಂಸ್ಥೆ ತಯಾರಿಸುತ್ತಿರುವ ಈ MQ-9B ಪ್ರಿಡೆಟರ್ ಡ್ರೋನ್ ಗಳನ್ನು ಭಾರತ ಖರೀದಿ ಮಾಡುತ್ತಿರುವುದು ಇದೀಗ ರಕ್ಷಣಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಭಾರತ ಖರೀದಿ ಮಾಡುತ್ತಿರುವ ಒಟ್ಟು 31 ಡ್ರೋನ್ ಗಳ ಪೈಕಿ 15 ಡ್ರೋನ್ ಗಳನ್ನು ಭಾರತೀಯ ನೌಕಾಪಡೆ ತೆಕ್ಕೆಗೆ ನೀಡಲಾಗುತ್ತಿದ್ದು, ಉಳಿದ 16 ಡ್ರೋನ್ ಗಳ ಪೈಕಿ ಭಾರತೀಯ ಸೇನೆಗೆ ಮತ್ತು ಭಾರತೀಯ ವಾಯುಸೇನೆಗೆ ತಲಾ 8 ಡ್ರೋನ್ ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಪ್ರತಿ MQ-9B ಪ್ರಿಡೆಟರ್ ಡ್ರೋನ್ ಗಳ ಬೆಲೆ ಸುಮಾರು 3.5 billion ಡಾಲರ್ ಗಳಾಗಿದ್ದು, ವಿದೇಶಿ ಮಾರಾಟ ನೀತಿ ಅಡಿಯಲ್ಲಿ ಅಮೆರಿಕ ಇದನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದನೆ ನೀಡಿದೆ ಎನ್ನಲಾಗಿದೆ. ಈಗಾಗಲೇ ಭಾರತ ಮತ್ತು ಅಮೆರಿಕ ಸರ್ಕಾರಗಳು ಈ ಡ್ರೋನ್ ಒಪ್ಪಂದಕ್ಕೆ ಕ್ಯಾಬಿನೆಟ್ ಹಂತದ ಅನುಮೋದನೆ ನೀಡಿವೆ ಎನ್ನಲಾಗಿದೆ.
ಶತ್ರುಕಣ್ಣಿಗೆ ಕಾಣದ ಹಾಗೆ ಅತ್ಯಂತ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ
ಇನ್ನು ಈ MQ-9B Predator droneಗಳು ಅತ್ಯಂತ ವಿಧ್ವಂಸಕಾರಿ ಡ್ರೋನ್ ಗಳಾಗಿದ್ದು, ಈ ಡ್ರೋನ್ ಗಳನ್ನು ಶತ್ರುಕಣ್ಣಿಗೆ ಕಾಣದ ಹಾಗೆ ಅತ್ಯಂತ ಎತ್ತರದಲ್ಲಿ ಹಾರಾಡುವಂತೆ ನಿರ್ಮಿಸಲಾಗಿದೆ. ಈ ಡ್ರೋನ್ 40,000 ಅಡಿ ಎತ್ತರದಲ್ಲಿ ಒಮ್ಮೆಗೆ 40 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಅಲ್ಲದೆ ಇದು ಸುಮಾರು 2,155 ಕೆಜಿಯಷ್ಟು ಬಾಹ್ಯ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಅದರ ಕಣ್ಗಾವಲು ಸಾಮರ್ಥ್ಯಗಳ ಹೊರತಾಗಿ, MQ-9B ಸ್ಟ್ರೈಕ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಇದು ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಹೊಡೆಯಲು ಅನುವು ಮಾಡಿಕೊಡುತ್ತದೆ. ಇದು ಸ್ವಯಂಚಾಲಿತ ಟೇಕ್-ಆಫ್‌ಗಳು ಮತ್ತು ಲ್ಯಾಂಡಿಂಗ್‌ಗಳ ಸಾಮರ್ಥ್ಯವನ್ನು ಹೊಂದಿದ್ದು, ನಾಗರಿಕ ವಾಯುಪ್ರದೇಶಕ್ಕೆ ಸುರಕ್ಷಿತವಾಗಿ ಈ ಡ್ರೋನ್ ಗಳನ್ನು ಸಂಯೋಜಿಸಬಹುದಾಗಿದೆ. ಭೂಮಿ ಮತ್ತು ಕಡಲ ಕಣ್ಗಾವಲು, ಜಲಾಂತರ್ಗಾಮಿ ವಿರೋಧಿ ಮತ್ತು ಮೇಲ್ಮೈ-ವಿರೋಧಿ ಯುದ್ಧ, ಎಲೆಕ್ಟ್ರಾನಿಕ್ ಯುದ್ಧ ಮತ್ತು ವಿಶೇಷ ಸೇನಾ ಕಾರ್ಯಾಚರಣೆಗಳಿಗೆ ಈ ಡ್ರೋನ್ ಗಳು ಸೂಕ್ತವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.