ಚೆನ್ನೈ: ದಂಪತಿ ಹೆಚ್ಚೆಚ್ಚು ಮಕ್ಕಳನ್ನು ಹೊಂದಬೇಕೆಂದು ತಮಿಳು ನಾಡು ಸಿಎಂ ಎಂ ಕೆ ಸ್ಟಾಲಿನ್ ನೂತನ ದಂಪತಿಗಳನ್ನು ಒತ್ತಾಯಿಸಿರುವ ಪ್ರಸಂಗ ನಡೆದಿದೆ.
ಚೆನ್ನೈನಲ್ಲಿ 31 ಜೋಡಿಗಳು ವಿವಾಹವಾದ ರಾಜ್ಯದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಡೆಸಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅವರ ಪ್ರಕಾರ, ಬಹುಶಃ ದಂಪತಿಗಳಿಗೆ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಸ್ಟಾಲಿನ್ ತಮ್ಮ ಭಾಷಣದಲ್ಲಿ, ಹಿಂದಿನ ಕಾಲದಲ್ಲಿ ಹಿರಿಯರು ನವ ವಿವಾಹಿತ ದಂಪತಿಗಳಿಗೆ 16 ರೂಪದ ಸಂಪತ್ತನ್ನು ಹೊಂದುವಂತೆ ಆಶೀರ್ವದಿಸುತ್ತಿದ್ದರೆ, ಬಹುಶಃ ಈಗ 16 ರೂಪದ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದಿದ್ದಾರೆ.
ಹಿರಿಯರು ನಿಮಗೆ 16 ಸಿಕ್ಕಿ ಸಮೃದ್ಧವಾಗಿ ಬಾಳಿ ಎಂದು ನವ ದಂಪತಿಗೆ ಹರಸುತ್ತಾರೆ. ಅದು 16 ಮಕ್ಕಳಲ್ಲ ಬದಲಾಗಿ 16 ಐಶ್ವರ್ಯದ ರೂಪಗಳ ಅರ್ಥ. ಇದನ್ನು ಲೇಖಕ ವಿಶ್ವನಾಥನ್ ಅವರು ತಮ್ಮ ಪುಸ್ತಕದಲ್ಲಿ ‘ಗೋವು, ಮನೆ, ಹೆಂಡತಿ, ಮಕ್ಕಳು, ಶಿಕ್ಷಣ, ಕುತೂಹಲ, ಜ್ಞಾನ, ಶಿಸ್ತು, ನೆಲ, ಜಲ, ವಯಸ್ಸು, ವಾಹನ, ಚಿನ್ನ, ಆಸ್ತಿ, ಕೊಯ್ಲು ಮತ್ತು ಪ್ರಶಂಸೆ’ ಎಂದು ಉಲ್ಲೇಖಿಸಿದ್ದಾರೆ ಎಂದು ಸ್ಟಾಲಿನ್ ಹೇಳಿದರು.
ಆದರೆ ಈಗ ಯಾರೂ 16 ರೀತಿಯ ಸಂಪತ್ತನ್ನು ಪಡೆಯಲು ನಿಮ್ಮನ್ನು ಆಶೀರ್ವದಿಸುತ್ತಿಲ್ಲ. ಅವರು ನಿಮಗೆ ಸಾಕಷ್ಟು ಮಕ್ಕಳನ್ನು ಹೊಂದಲು ಮತ್ತು ಸಮೃದ್ಧವಾಗಿ ಬದುಕಲು ಮಾತ್ರ ಆಶೀರ್ವದಿಸುತ್ತಾರೆ. ಇತ್ತೀಚೆಗೆ ಲೋಕಸಭಾ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ಜನಸಂಖ್ಯೆಗೆ ಆಧಾರವಾಗಿ ಲೋಕಸಭಾ ಕ್ಷೇತ್ರಗಳನ್ನು ವಿಂಗಡಣೆ ಮಾಡುವುದರಿಂದ ಜನರು ಹೆಚ್ಚೆಚ್ಚು ಮಕ್ಕಳನ್ನು ಹೊಂದುವುದು ಉತ್ತಮ.
ಇಂದು, ಲೋಕಸಭೆ ಕ್ಷೇತ್ರಗಳು ಕಡಿಮೆಯಾಗುತ್ತಿರುವ ಸನ್ನಿವೇಶವಿರುವುದರಿಂದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು, ನಾವು 16 ಮಕ್ಕಳನ್ನು ಹೊಂದುವ ಗುರಿ ಇಟ್ಟುಕೊಳ್ಳಬಾರದು ಏಕೆ ಎಂದು ಕೇಳಿದ್ದಾರೆ.
ಕುಟುಂಬಗಳು ಹೆಚ್ಚಿನ ಜನಸಂಖ್ಯೆ ಹೊಂದುವುದನ್ನು ಪ್ರೋತ್ಸಾಹಿಸಲು ಆಂಧ್ರ ಪ್ರದೇಶ ಸರ್ಕಾರವು ಪ್ರೋತ್ಸಾಹಕಗಳನ್ನು ನೀಡಲು ಯೋಜಿಸುತ್ತಿದೆ ಎಂದು ಇತ್ತೀಚೆಗೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು. ದಕ್ಷಿಣ ಭಾರತದ ರಾಜ್ಯಗಳ ನಿವಾಸಿಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಪರಿಗಣಿಸುವಂತೆ ಅವರು ಒತ್ತಾಯಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆಯನ್ನು ಪರಿಗಣಿಸುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ ಅವರ ಹೇಳಿಕೆಗಳು ಬಂದಿದ್ದವು.
ಚಂದ್ರಬಾಬು ನಾಯ್ಡು ಹೇಳಿದ್ದೇನು?: ಕಳೆದ ವಾರದ ಆರಂಭದಲ್ಲಿ, ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ದಕ್ಷಿಣದ ರಾಜ್ಯಗಳ ಜನರಿಗೆ ಹೆಚ್ಚಿನ ಮಕ್ಕಳನ್ನು ಹೊಂದಲು ಕರೆ ನೀಡಿದ್ದರು, ವಯಸ್ಸಾದ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ನಾಯ್ಡು ಹೇಳಿದ್ದರು.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ರಾಜ್ಯವು ಈ ಹಿಂದೆ ಕಾನೂನನ್ನು ಅಂಗೀಕರಿಸಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ನಾವು ಆ ಕಾನೂನನ್ನು ರದ್ದುಗೊಳಿಸಿದ್ದು ಅದನ್ನು ಹಿಂತೆಗೆದುಕೊಳ್ಳಲು ನೋಡುತ್ತಿದ್ದೇವೆ. ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರವು ಹೆಚ್ಚಿನ ಪ್ರಯೋಜನಗಳನ್ನು ಒದಗಿಸಬಹುದು ಎಂದು ಹೇಳಿದ್ದರು.