ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಕನಿಷ್ಠ 50 ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.14 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 350 ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ.
ಹೆಚ್ಚಿನ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬಂದಿವೆ. 15 ವಿಮಾನಗಳಿಗೆ ಇಂತಹ ಬೆದರಿಕೆ ಬಂದ ನಂತರ ಸಂಪೂರ್ಣ ತಪಾಸಣೆ ನಡೆಸಲಾಯಿತು. ಬಳಿಕ ಎಲ್ಲಾ ವಿಮಾನಗಳು ಹಾರಾಟ ಆರಂಭಿಸಿವೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ.
ಇಂಡಿಗೋ 18 ವಿಮಾನಗಳಿಗೆ ಮತ್ತು ವಿಸ್ತಾರಾ 17 ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ವಿಮಾನಯಾನ ಸಂಸ್ಥೆಗಳಿಗೆ ಸರಣಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಐಟಿ ನಿಯಮಗಳಡಿ ತಪ್ಪು ಮಾಹಿತಿಯನ್ನು ತ್ವರಿತವಾಗಿ ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ITಸಚಿವಾಲಯ ಸೂಚಿಸಿದೆ.
ಈ ಮಧ್ಯೆ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ಎದುರು ನೋಡುತ್ತಿದೆ.