ಹೈದರಾಬಾದ್: ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರ ಸೋದರ ಮಾವ, ಉದ್ಯಮಿ ರಾಜ್ ಪಾಕಲಾ ಅವರ ಫಾರ್ಮ್‌ಹೌಸ್ ನಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಸೈಬರಾಬಾದ್ ವಿಶೇಷ ಕಾರ್ಯಾಚರಣೆ ಪಡೆ(ಎಸ್‌ಒಟಿ), ಅಬಕಾರಿ ಅಧಿಕಾರಿಗಳು ಮತ್ತು ನಾರ್ಸಿಂಗಿ ಪೊಲೀಸರು ಜಂಟಿಯಾಗಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು, ಕೊಕೇನ್ ಬಳಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ.
ಫಾರ್ಮ್‌ಹೌಸ್ ನಲ್ಲಿ ಮದ್ಯ ಪೂರೈಸಲು ಪರವಾನಗಿ ಪಡೆಯದಿದ್ದಕ್ಕಾಗಿ ಅಬಕಾರಿ ಕಾಯ್ದೆಯ ಸೆಕ್ಷನ್ 34 ಎ, 34(1) ಆರ್/ಡಬ್ಲ್ಯು 9 ಅಡಿಯಲ್ಲಿ ರಾಜ್ ಪಾಕಲಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಪಾರ್ಟಿಯಲ್ಲಿ ಕನಿಷ್ಠ 31 ಜನರಿದ್ದರು. ಇದರಲ್ಲಿ 21 ಪುರುಷರು ಮತ್ತು 14 ಮಹಿಳೆಯರು ಸೇರಿದ್ದಾರೆ. ಖಚಿತ ಮಾಹಿತಿ ಆಧರಿಸಿ ಪೊಲೀಸರು ಶೋಧ ನಡೆಸಿದ್ದು, ಅನುಮತಿ ಮೀರಿ ದಾಸ್ತಾನು ಮಾಡಲಾಗಿದ್ದ 10.5 ಲೀಟರ್ ಮೌಲ್ಯದ ವಿದೇಶಿ ಮದ್ಯ ಪತ್ತೆಯಾಗಿದೆ.
ಇದಲ್ಲದೇ 10 ಭಾರತೀಯ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಪೊಲೀಸರು ನಂತರ ಪಾರ್ಟಿಯಲ್ಲಿ ಭಾಗವಹಿಸಿದ್ದವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಿದರು.
ಇವರಲ್ಲಿ ವಿಜಯ್ ಮದ್ದೂರಿ ಎಂಬಾತನನ್ನು ಆಸ್ಪತ್ರೆಗೆ ಕರೆದೊಯ್ದು ರಕ್ತ ಪರೀಕ್ಷೆ ನಡೆಸಿದಾಗ ಕೊಕೇನ್ ಇರುವುದು ದೃಢಪಟ್ಟಿದೆ. ಆತನ ವಿರುದ್ಧ ಮೋಕಿಲಾ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಎಲ್ಲಾ ಗಣ್ಯ ವ್ಯಕ್ತಿಗಳ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.