ವಿಲ್ಲುಪುರಂ: 2026 ರ ತಮಿಳು ನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿರುವ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅಧ್ಯಕ್ಷ ನಟ ವಿಜಯ್ ಇಂದು ಭಾನುವಾರ ಚೆನ್ನೈನಿಂದ 154 ಕಿಮೀ ದೂರದಲ್ಲಿರುವ ವಿಲ್ಲುಪುರಂ ಬಳಿಯ ವಿಕ್ರವಂಡಿ ತನ್ನ ಮೊದಲ ರಾಜಕೀಯ ಸಮಾವೇಶವನ್ನು ನಡೆಸುತ್ತಿದ್ದಾರೆ.
ತಮಿಳು ನಾಡು ಚಲನಚಿತ್ರ ಪ್ರೇಮಿಗಳ ಐಕಾನ್ ಟಿವಿಕೆಯ ತತ್ವಗಳು ಮತ್ತು ಸೈದ್ಧಾಂತಿಕ ದೃಷ್ಟಿಕೋನವನ್ನು ಇಂದು ಘೋಷಿಸಲಿದ್ದು, ಹೀಗಾಗಿ ತಮಿಳು ನಾಡಿನಲ್ಲಿ ಕಾರ್ಯಕ್ರಮ ಬಗ್ಗೆ ಭಾರೀ ನಿರೀಕ್ಷೆಯಿದೆ. ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಸಾರ್ವಜನಿಕಗೊಳಿಸಲು ಸಮ್ಮೇಳನವು ಸೂಕ್ತ ವೇದಿಕೆಯಾಗಿದೆ ಎಂದು ಅವರೇ ಈ ಹಿಂದೆ ಹೇಳಿಕೊಂಡಿದ್ದರು.
ವಿಚಾರವಾದಿ ದ್ರಾವಿಡ ಧೀಮಂತ 'ಪೆರಿಯಾರ್' ಇವಿ ರಾಮಸಾಮಿಯಿಂದ ಹಿಡಿದು ಡಾ ಬಿಆರ್ ಅಂಬೇಡ್ಕರ್ ಮತ್ತು ಕಾಂಗ್ರೆಸ್ ಹಿರಿಯ ಕೆ ಕಾಮರಾಜ್, ಹಿಂದಿನ ತಮಿಳು ರಾಜರು - ಚೇರ, ಚೋಳ ಮತ್ತು ಪಾಂಡ್ಯ - ಹಾಗೂ ಧೀರ ರಾಣಿ ವೇಲು ನಾಚಿಯಾರ್ ವರೆಗೆ ರಾಜಕೀಯ ದಿಗ್ಗಜರ ಬೃಹತ್ ಕಟೌಟ್ ಗಳಿಂದ ಸ್ಥಳವನ್ನು ಅಲಂಕರಿಸಲಾಗಿದೆ. ವಿಜಯ್ ಅವರ ಕಟೌಟ್ ಟಿವಿಕೆಗಳ ರಾಜಕೀಯ ದೃಷ್ಟಿಕೋನದ ಸೂಚನೆಯನ್ನು ನೀಡುವಂತೆ ಇವೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ವಿಜಯ್ ಅವರು ರಾಜಕೀಯ ಕ್ಷೇತ್ರಕ್ಕೆ ಇಳಿದಿರುವುದರಿಂದ ತಮಿಳು ನಾಡಿನಲ್ಲಿ ಡಿಎಂಕೆ Vs ಎಐಎಡಿಎಂಕೆ ದ್ವಿಧ್ರುವಿಯನ್ನು ಬಹುಧ್ರುವೀಯವಾಗಿ ಬದಲಾಯಿಸುತ್ತದೆ. ಅಪಾರ ಅಭಿಮಾನಿ ಬಳಕ ಹೊಂದಿರುವ ವಿಜಯ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ದಂತಕಥೆಗಳನ್ನು ಮೀರಿಸಿ ದೊಡ್ಡ ಬಾಕ್ಸ್ ಆಫೀಸ್ ಸ್ಟಾರ್ ಮತ್ತು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಒಬ್ಬರಾಗಿದ್ದಾರೆ.
ತಮಿಳು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಮಾಸ್ ಹೀರೋ, ವಿಜಯ್ ವಿಧಾನಸಭಾ ಚುನಾವಣೆಯಲ್ಲಿ ಎರಡು ಪ್ರಬಲ ದ್ರಾವಿಡ ಪಕ್ಷಗಳಾದ ಆಡಳಿತಾರೂಢ ಡಿಎಂಕೆ ಮತ್ತು ಪ್ರತಿಪಕ್ಷ ಎಐಎಡಿಎಂಕೆಯನ್ನು ಎದುರಿಸುವ ಉದ್ದೇಶವನ್ನು ತಿಳಿಸಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರು ಯಾವುದೇ ಪಕ್ಷವನ್ನು ಬೆಂಬಲಿಸಿರಲಿಲ್ಲ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ 45ಕ್ಕೆ ಹೊಂದಿಕೊಂಡಿರುವ ಇಂದಿನ ಸಮಾವೇಶ ಸ್ಥಳದಲ್ಲಿ ಅಭಿಮಾನಿಗಳು, ಯುವಕರು ಸೇರುತ್ತಿದ್ದಾರೆ. ತಮಿಳುನಾಡಿನಾದ್ಯಂತ ಮತ್ತು ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಸಂಘಟಕರು ಹೇಳುತ್ತಾರೆ.