ವಡೋದರಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಇಂದು ಬೆಳಗ್ಗೆ ಗುಜರಾತ್‌ನ ವಡೋದರಾ ನಗರದಲ್ಲಿ ಟಾಟಾ ಏರ್ ಬಸ್ ತಯಾರಿಕಾ ಘಟಕವನ್ನು ಉದ್ಘಾಟಿಸಿದರು.ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಕ್ಯಾಂಪಸ್ ನಲ್ಲಿ ಸಿ-295 ವಿಮಾನ ತಯಾರಿಕಾ ಸಂಕೀರ್ಣವನ್ನು ಸ್ಥಾಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, C-295 ಸೌಲಭ್ಯ ನವ ಭಾರತದ ಕೆಲಸದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ನಾನು ಗುಜರಾತ್ ಸಿಎಂ ಆಗಿದ್ದಾಗ ವಡೋದರಾದಲ್ಲಿ ರೈಲು ಬೋಗಿಗಳ ತಯಾರಿಕೆ ಕಾರ್ಖಾನೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಇಂದು ನಾವು ಆ ಕಾರ್ಖಾನೆಯಲ್ಲಿ ತಯಾರಿಸಿದ ಮೆಟ್ರೋ ಕೋಚ್‌ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ.ಭವಿಷ್ಯದಲ್ಲಿ ಇಲ್ಲಿನ ಕಾರ್ಖಾನೆಯಲ್ಲಿ ತಯಾರಾದ ವಿಮಾನಗಳನ್ನು ಇತರ ದೇಶಗಳಿಗೂ ರಫ್ತು ಮಾಡುವ ಭರವಸೆಯಿದೆ ಎಂದರು.
ಸ್ಪೇನ್ ಪ್ರಧಾನಿ ಸ್ಯಾಂಚೆಜ್ ಮಾತನಾಡಿ, ಹೊಸ ಕೈಗಾರಿಕಾ ತಾಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಟಾಟಾ ಸಮೂಹವನ್ನು "ದೈತ್ಯರಲ್ಲಿ ದೈತ್ಯ" ಎಂದು ಗುಣಗಾನ ಮಾಡಿದರು. ಇಂದು ನಾವು ಅತ್ಯಾಧುನಿಕ ಕೈಗಾರಿಕಾ ಸೌಕರ್ಯವನ್ನು ಮಾತ್ರ ಅಧಿಕೃತವಾಗಿ ಉದ್ಘಾಟಿಸುತ್ತಿಲ್ಲ. ಏರ್‌ಬಸ್ ಮತ್ತು ಟಾಟಾ ನಡುವಿನ ಈ ಪಾಲುದಾರಿಕೆಯು ಭಾರತೀಯ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ಕೊಡುಗೆ ನೀಡುತ್ತದೆ. ಅಲ್ಲದೇ ಇತರ ಯುರೋಪಿಯನ್ ಕಂಪನಿಗಳ ಆಗಮನಕ್ಕೆ ಹೊಸ ಬಾಗಿಲು ತೆರೆಯುತ್ತದೆ ಎಂದರು.
ಟಾಟಾ ಬಹುಶಃ ಭಾರತೀಯ ಕೈಗಾರಿಕಾ ಕ್ಷೇತ್ರದ ಬಲವಾಗಿದೆ. ಇದರ ಉತ್ಪನ್ನಗಳು ಮತ್ತು ಸೇವೆಗಳು ಗ್ರಹದ ಮೇಲಿನ ಪ್ರತಿಯೊಂದು ದೇಶದಲ್ಲಿಯೂ ಇವೆ. ಸ್ಪೇನ್‌ಗಾಗಿ, ಏರ್‌ಬಸ್ ಒಕ್ಕೂಟದ ಅವಿಭಾಜ್ಯ ಅಂಗವಾಗಿರುವುದರಿಂದ, ಅದು ಪ್ರತಿನಿಧಿಸುವ ಮೌಲ್ಯಗಳನ್ನು ರಕ್ಷಿಸುತ್ತದೆ. ಇದು ಯುರೋಪಿನ ಸಹಕಾರ, ಆಧುನಿಕತೆ ಹಾಗೂ ಪ್ರಗತಿಯನ್ನು ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನಾ ಉಭಯ ದೇಶಗಳ ಪ್ರಧಾನಿ ಭರ್ಜರಿ ರೋಡ್‌ಶೋ ನಡೆಸಿದರು. ವಿಮಾನ ನಿಲ್ದಾಣದಿಂದ ಟಾಟಾ ವಿಮಾನ ತಯಾರಿಕಾ ಸಂಕೀರ್ಣದವರೆಗೂ 2.5 ಕಿ.ಮೀ ದೂರ ತೆರೆದ ಜೀಪ್‌ನಲ್ಲಿ ಪ್ರಯಾಣಿಸಿದ ಉಭಯ ದೇಶಗಳ ನಾಯಕರನ್ನು ಮಾರ್ಗದ ಎರಡೂ ಬದಿಗಳಲ್ಲಿ ನಿಂತಿದ್ದ ಜನರು ಹರ್ಷೋದ್ಗಾರ ಮತ್ತು ಘೋಷಣೆ ಕೂಗುವುದರೊಂದಿಗೆ ಸ್ವಾಗತಿಸಿದರು. ಭಾರತದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ವಿವಿಧ ಕಲಾವಿದರ ಪ್ರದರ್ಶನ ಆಕರ್ಷಣೀಯವಾಗಿತ್ತು. ವಿಮಾನ ತಯಾರಿಕೆ ಸಂಕೀರ್ಣ ಉದ್ಘಾಟನೆಯ ನಂತರ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಲು ಐತಿಹಾಸಿಕ ಲಕ್ಷ್ಮಿ ವಿಲಾಸ್ ಅರಮನೆಗೆ ತೆರಳಿದರು.
2021ರ ಸೆಪ್ಟೆಂಬರ್ ನಲ್ಲಿ ಭಾರತ 56 ಸಿ-295 ವಿಮಾನಗಳನ್ನು ಸೇರ್ಪಡೆಗೊಳಿಸಲು ಏರ್ ಬಸ್ ಡಿಫೆನ್ಸ್ ಮತ್ತು ಸ್ಪೇನ್ ಸಂಸ್ಥೆಯೊಂದಿಗೆ ರೂ. 21 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದದ ಪ್ರಕಾರ ಸ್ಪೇನ್ ಮುಂದಿನ ನಾಲ್ಕು ವರ್ಷಗಳಲ್ಲಿ 16 ಯುದ್ಧ ವಿಮಾನಗಳನ್ನು ರವಾನಿಸಲಾಗಿದೆ. ಉಳಿದ 40 ವಿಮಾನಗಳನ್ನು ಎರಡು ಕಂಪನಿಗಳ ನಡುವಿನ ಒಪ್ಪಂದದ ಭಾಗವಾಗಿ ಈಗ ಉದ್ಘಾಟಿಸಲಾದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ (TASL) ನಲ್ಲಿ ತಯಾರಿಸಲಾಗುತ್ತದೆ.