ನವದೆಹಲಿ: ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್‌ಚೋಕ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಸೇನೆಯನ್ನು ಹಿಂತೆಗೆತ ಪ್ರಕ್ರಿಯೆ ಇಂದು ಪೂರ್ಣಗೊಂಡಿದೆ. ಸೇನಾ ವಾಪಸಾತಿಯ ನಂತರ, ಎರಡೂ ಕಡೆಯವರು ಶೀಘ್ರದಲ್ಲೇ ತಮ್ಮ ತಮ್ಮ ಪ್ರದೇಶಗಳಲ್ಲಿ ಸಂಘಟಿತ ಗಸ್ತು ತಿರುಗುವಿಕೆಯನ್ನು ಪ್ರಾರಂಭಿಸುತ್ತಾರೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಗ್ರೌಂಡ್ ಕಮಾಂಡರ್ಸ್ ಮಾತುಕತೆ ಮುಂದುವರಿಸಲಿದ್ದಾರೆ. ಅದೇ ಸಮಯದಲ್ಲಿ, ಎರಡೂ ಕಡೆಯ ಸೇನೆಗಳು ನಾಳೆ ದೀಪಾವಳಿಯಂದು ಸಿಹಿ ವಿನಿಮಯ ಮಾಡಿಕೊಳ್ಳುತ್ತವೆ. ಈ ದೀರ್ಘಾವಧಿಯ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತವು ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿತ್ತು. ಇದರಿಂದಾಗಿ ಏಪ್ರಿಲ್ 2020ರ ಹಿಂದಿನ ಪರಿಸ್ಥಿತಿ ನಿರ್ಮಾಣವಾಗಲಿದೆ.
ಅಕ್ಟೋಬರ್ 21ರಂದು ಪೂರ್ವ ಲಡಾಖ್‌ನಲ್ಲಿರುವ ನೈಜ ನಿಯಂತ್ರಣ ರೇಖೆಯಲ್ಲಿ (LAC) ಗಸ್ತು ತಿರುಗಲು ಭಾರತವು ಚೀನಾದೊಂದಿಗೆ ಒಪ್ಪಂದವನ್ನು ಘೋಷಿಸಿತು. ಇದು ನಾಲ್ಕು ವರ್ಷಗಳ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಿತು. ಇದಕ್ಕೂ ಮೊದಲು, ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಅಲ್ಲಿ ಇಬ್ಬರೂ ನಾಯಕರು ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಗಸ್ತು ವ್ಯವಸ್ಥೆಗಳ ಒಪ್ಪಂದವನ್ನು ಸ್ವಾಗತಿಸಿದರು.
ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ LAC ನಲ್ಲಿ ಹೊಸ ಗಸ್ತು ವ್ಯವಸ್ಥೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಘೋಷಿಸಿದ ನಂತರ ಸಭೆ ನಡೆಯಿತು. ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು 2020ರಲ್ಲಿ ಪೂರ್ವ ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಪ್ರಾರಂಭವಾಯಿತು. ಇದು ಚೀನಾದ ಮಿಲಿಟರಿ ಕ್ರಮಗಳಿಂದ ಪ್ರಚೋದಿಸಲ್ಪಟ್ಟಿತ್ತು. ದ್ವಿಪಕ್ಷೀಯ ಸಂಬಂಧಗಳಲ್ಲಿ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿದೆ.