ಪೋರಬಂದರ್: ರಕ್ಷಣಾ ಕಾರ್ಯಾಚರಣೆ ವೇಳೆ ಭಾರತೀಯ ತೀರಪಡೆ(ICG) ಹೆಲಿಕಾಪ್ಟರ್ ಗುಜರಾತ್‌ನ ಪೋರಬಂದರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದ್ದು ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಐಸಿಜಿಯ ಸುಧಾರಿತ ಲಘು ಹೆಲಿಕಾಪ್ಟರ್‌ನಲ್ಲಿ (ALH) ನಾಲ್ವರು ಸಿಬ್ಬಂದಿಯಲ್ಲಿ ಒಬ್ಬರನ್ನು ರಕ್ಷಿಸಲಾಗಿದ್ದು, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಐಸಿಜಿ ಹೇಳಿಕೆಯಲ್ಲಿ ತಿಳಿಸಿದೆ.
ಗುಜರಾತ್‌ನ ಪೋರಬಂದರ್‌ನ ಹರಿ ಲೀಲಾ ಮೋಟಾರ್ ಟ್ಯಾಂಕರ್‌ನಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಕಳೆದ ರಾತ್ರಿ 11 ಗಂಟೆಗೆ ಭಾರತ ಕೋಸ್ಟ್ ಗಾರ್ಡ್ ALH ಹೆಲಿಕಾಪ್ಟರ್ ನ್ನು ಬಳಸಲಾಯಿತು, ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಬೇಕಾಗಿದ್ದರಿಂದ ಸಮುದ್ರಕ್ಕೆ ಇಳಿಯಿತು. ಓರ್ವ ಸಿಬ್ಬಂದಿ ಚೇತರಿಸಿಕೊಂಡಿದ್ದು, ಉಳಿದ ಮೂವರು ಸಿಬ್ಬಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ರಕ್ಷಣಾ ಪ್ರಯತ್ನಗಳಿಗಾಗಿ 4 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ ಎಂದು ಐಸಿಜಿ ಹೇಳಿಕೆ ತಿಳಿಸಿದೆ.