ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು PDP ಪಕ್ಷಗಳು ಮಾಜಿ ಉಗ್ರರಿಂದ ಬೆಂಬಲ ಪಡೆಯುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಬುಧವಾರ ಆರೋಪಿಸಿದ್ದಾರೆ.
ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಉಲ್ಲೇಖಿಸಿ ಮಾತನಾಡಿದ ಜಮ್ಮು-ಕಾಶ್ಮೀರದ ಬಿಜೆಪಿ ಉಸ್ತುವಾರಿ ಮಾಧವ್, ಈ ಎರಡು ಕುಟುಂಬಗಳಿಗೆ ಬಾಗಿಲು ತೋರಿಸಬೇಕಾಗಿದೆ. NC ಮತ್ತು PDP ಅಭ್ಯರ್ಥಿಗಳ ಪರ ಮಾಜಿ ಉಗ್ರರು ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ನನಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರವನ್ನ ತನ್ನ ಕೆಟ್ಟ ದಿನಗಳನ್ನು ಕೊಂಡೊಯ್ಯಲು ಬಯಸುವ ಪಕ್ಷಗಳನ್ನು ಜನರು ಸೋಲಿಸಬೇಕು ಮತ್ತು ಶಾಂತಿ ಮತ್ತು ಪ್ರಗತಿಯನ್ನು ಬಯಸುವ ಹೊಸ ನಾಯಕತ್ವವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
NC, PDP ಮತ್ತಿತರರು ಜಮ್ಮು- ಕಾಶ್ಮೀರವನ್ನು ಮತ್ತೆ ಹಳೆಯ ಕೆಟ್ಟ ದಿನಗಳಿಗೆ ಕೊಂಡೊಯ್ಯುವ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಹೊಸ ಪಕ್ಷ, ಹೊಸ ನಾಯಕರು ಬರಲಿದ್ದು, ಜಮ್ಮು ಪ್ರದೇಶದಲ್ಲಿ ಬಿಜೆಪಿ ಶಾಂತಿ ಮತ್ತು ಅಭಿವೃದ್ಧಿಯ ಪ್ರತಿನಿಧಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಮೈತ್ರಿ ಪರಿಸ್ಥಿತಿ ಎದುರಾದರೆ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದರು.
ಸೆಪ್ಟೆಂಬರ್ 6 ರಂದು ಜಮ್ಮುವಿನಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಲಿದ್ದಾರೆ. ತದನಂತರ ಪ್ರಧಾನಿ ಮೋದಿ ಮತ್ತಿತರ ನಾಯಕರು ಭೇಟಿ ನೀಡಲಿದ್ದಾರೆ ಎಂದು ರಾಮ್ ಮಾಧವ್ ತಿಳಿಸಿದರು.