ನವದೆಹಲಿ: ಬಿಜು ಜನತಾ ದಳ(ಬಿಜೆಡಿ)ದ ರಾಜ್ಯಸಭಾ ಮಾಜಿ ಸದಸ್ಯ ಸುಜೀತ್ ಕುಮಾರ್ ಅವರು ಶುಕ್ರವಾರ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಡಿ ಕುಮಾರ್ ಅವರನ್ನು ಉಚ್ಚಾಟಿಸಿದ ನಂತರ ಅವರು ಇಂದು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಪಕ್ಷದ ಒಡಿಶಾ ಉಸ್ತುವಾರಿ ವಿಜಯಪಾಲ್ ಸಿಂಗ್ ತೋಮರ್, ಸಂಸದ ಭರ್ತೃಹರಿ ಮಹತಾಬ್ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಸುಜೀತ್ ಕುಮಾರ್ ಅವರು ಬಿಜೆಪಿ ಸೇರ್ಪಡೆಯಾದರು.
ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶ ಮತ್ತು 2036ರ ವೇಳೆಗೆ ಒಡಿಶಾವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ಅವರ ದೂರದೃಷ್ಟಿಯಿಂದ ಪ್ರಭಾವಿತನಾಗಿ ಕೇಸರಿ ಪಕ್ಷಕ್ಕೆ ಸೇರಿದ್ದೇನೆ ಎಂದು ಹೇಳಿದರು.