ನವದೆಹಲಿ: ಬ್ಯಾಂಕ್ ಸಾಲ ವಂಚನೆ ಪ್ರಕರಣ ಆರೋಪದಲ್ಲಿ ವಾಹನ ಉಪಕರಣ ತಯಾರಿಕಾ ಕಂಪನಿ ಆಮ್ಟೆಕ್ ಗ್ರೂಪ್‌ನ ಫಾರ್ಮ್ ಹೌಸ್‌ಗಳು, ನೂರಾರು ಎಕರೆ ಕೃಷಿ ಮತ್ತು ಕೈಗಾರಿಕಾ ಭೂಮಿ ಸೇರಿದಂತೆ 5,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಷೇರುಗಳು ಮತ್ತು ಡಿಬೆಂಚರ್‌ಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
ಜುಲೈನಲ್ಲಿ ಆಮ್ಟೆಕ್ ಗ್ರೂಪ್ ಪ್ರವರ್ತಕ ಅರವಿಂದ್ ಧಾಮ್ ಅವರನ್ನು ಬಂಧಿಸಿದ ನಂತರ ಇಡಿ ಈ ಕ್ರಮ ಕೈಗೊಂಡಿದೆ. ಸಿಬಿಐ ಎಫ್‌ಐಆರ್ ಮತ್ತು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಗೆ ನೀಡಿದ ನಿರ್ದೇಶನವನ್ನು ಪರಿಗಣಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.
ಅಕ್ರಮವಾಗಿ ಬ್ಯಾಂಕ್ ಸಾಲವನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು IDBI ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಸಿಬಿಐನಲ್ಲಿ ದೂರು ದಾಖಲಿಸಿದ್ದವು. ಸುಮಾರು 27, 000 ಕೋಟಿ ಬ್ಯಾಂಕ್ ವಂಚನೆಯಾಗಿರುವುದಾಗಿ ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚುವರಿ ವಂಚನೆಯ ಸಾಲ ಪಡೆಯಲು ಬ್ಯಾಂಕ್ ಸ್ಟೇಟ್ ಮೆಂಟ್ ನಲ್ಲಿ ಮಾಹಿತಿಯನ್ನು ಕುಶಲತೆಯಿಂದ ತಿರುಚಲಾಗಿದೆ ಮತ್ತು ಬ್ಯಾಂಕ್ ಖಾತೆಗಳ ಪುಸ್ತಕಗಳಲ್ಲಿ ನಕಲಿ ಆಸ್ತಿಗಳು ಮತ್ತು ಹೂಡಿಕೆ ಬಗ್ಗೆ ಮಾಹಿತಿ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.