ಶ್ರೀನಗರ: ಸೆಪ್ಟೆಂಬರ್ 25 ರಂದು ಎರಡನೇ ಹಂತದ ಮತದಾನ ನಡೆಯಲಿರುವ ಜಮ್ಮು-ಕಾಶ್ಮೀರದ ಶ್ರೀನಗರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಶ್ರೀನಗರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಾಯಿಸಿಕೊಂಡಿರುವ ಒಟ್ಟು 7,74,462 ಮತದಾರರಲ್ಲಿ 3,87,778 ಮಹಿಳೆಯರು, 3,86,654 ಪುರುಷರು ಮತ್ತು 30 ಜನರು ತೃತೀಯ ಲಿಂಗಿಗಳಿದ್ದಾರೆ.
ಸೆಂಟ್ರಲ್ ಶಾಲ್ತೆಂಗ್ ಮತ್ತು ಈದ್ಗಾ ಕ್ಷೇತ್ರಗಳೊಂದಿಗೆ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಮಹಿಳೆಯರೇ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತದಾರರಿಗೆ ಅನುಕೂಲವಾಗುವಂತೆ ಭಾರತೀಯ ಚುನಾವಣಾ ಆಯೋಗವು 932 ಮತಗಟ್ಟೆಗಳನ್ನು ಸ್ಥಾಪಿಸಿದೆ, ಅವುಗಳಲ್ಲಿ 885 ನಗರ ಮತಗಟ್ಟೆಗಳು ಮತ್ತು 47 ಗ್ರಾಮೀಣ ಮತಗಟ್ಟೆಗಳಾಗಿವೆ ಎಂದು ಜಿಲ್ಲಾಡಳಿತದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಸೆ.25ರಂದು ಎರಡನೇ ಹಂತದ ಚುನಾವಣೆ ನಡೆಯಲಿರುವ ಜಿಲ್ಲೆಯಲ್ಲಿ ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.