ಲಖನೌ: ಸಮಾಜವಾದಿ ಪಕ್ಷದ ಶಾಸಕನ ಮನೆಯಲ್ಲಿ ಕೆಲಸದಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಭದೋಹಿಯಲ್ಲಿರುವ ಶಾಸಕನ ಮನೆಯಲ್ಲಿ ಮನೆಕೆಲಸದಾಕೆಯ ಶವ ಪತ್ತೆಯಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ಮೃತ ನಾಜಿಯಾ ಎಂಬ ಮಹಿಳೆ ಹಲವು ವರ್ಷಗಳಿಂದ ಶಾಸಕ ಜಿಹಾದ್ ಬೇಗ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಕುಟುಂಬ ಸದಸ್ಯರು ಮಾಮ್‌ದೇವ್ ಪ್ರದೇಶದ ಕಾನ್ಶಿರಾಮ್ ಹೌಸಿಂಗ್‌ನಲ್ಲಿ ನೆಲೆಸಿದೆ ಎಂದು ಸರ್ಕಲ್ ಆಫೀಸರ್ ಅಜಯ್ ಕುಮಾರ್ ಚೌಹಾಣ್ ತಿಳಿಸಿದ್ದಾರೆ.
ನಗರದ ಮಲಿಕಾನ ಬಡಾವಣೆಯಲ್ಲಿರುವ ಶಾಸಕರ ಮನೆಯ ಮೇಲಿನ ಕೊಠಡಿಯಲ್ಲಿ ವಾಸವಿದ್ದ ನಾಜಿಯಾ (18) ಅವರ ಮೃತದೇಹ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಬೇಗ್ ಅವರು ಭದೋಹಿ ಸದರ್ ಕ್ಷೇತ್ರದಿಂದ ಎಸ್‌ಪಿ ಶಾಸಕರಾಗಿದ್ದಾರೆ.
ಇಂದು ಬೆಳಗ್ಗೆ ನಾಜಿಯಾ ಬಹಳ ಹೊತ್ತಾದರೂ ಏಳದೇ ಇದ್ದಾಗ ಶಾಸಕರ ಮನೆಯವರು ಒಳಗೆ ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಮತ್ತು ನಾಜಿಯಾ ಅವರ ದೇಹವು ಆಕೆಯ ದುಪಟ್ಟಾದಿಂದ ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಚೌಹಾಣ್ ಹೇಳಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.