ಇನ್ಫಾಲ್: ರಾಜಭವನಕ್ಕೆ ವಿದ್ಯಾರ್ಥಿಗಳು ಮೆರವಣಿಗೆ ಹೋಗುತ್ತಿದ್ದಾಗ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದು ತೀವ್ರ ಹಿಂಸಾಚಾರ ಉಂಟಾಗಿದ್ದ ಮಣಿಪುರದಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ನಿನ್ನೆ ಮಧ್ಯಾಹ್ನ ಇನ್ಫಾಲ್‌ನಲ್ಲಿ ವಿಧಿಸಲಾದ ಕರ್ಫ್ಯೂ ಇಂದು ಬೆಳಗ್ಗೆಯವರೆಗೆ ಜಾರಿಯಲ್ಲಿತ್ತು. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿದೆ ಆದರೆ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಇಂಟರ್ನೆಟ್ ಸೇವೆಗಳನ್ನು 5 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರದ ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ವಜಾಗೊಳಿಸಬೇಕು ಎಂದು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಪ್ರತಿಭಟನಾನಿರತ ವಿದ್ಯಾರ್ಥಿಗಳು ರಾಜಭವನದ ಕಡೆಗೆ ಮೆರವಣಿಗೆ ಸಾಗಿದ್ದ ವೇಳೆ ಘರ್ಷಣೆ ನಡೆಯಿತು.
ರಾಜ್ಯದ ರಾಜಧಾನಿಯ ಖ್ವೈರಂಬಂಡ್ ಮತ್ತು ಕಾಕ್ವಾ ನವೋರೆಮ್ ಲೈಕೈ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ವಿದ್ಯಾರ್ಥಿಗಳನ್ನು ಚದುರಿಸಲು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರು. ಘರ್ಷಣೆಯಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಣಿಪುರದ ವಿದ್ಯಾರ್ಥಿಗಳು ಮತ್ತು ಜನರ ಹಿತದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಶಸ್ತ್ರಾಸ್ತ್ರ ಮತ್ತು ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದೆ.