ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ದೇಶ, ಒಂದೇ ಚುನಾವಣೆ ಯೋಜನೆ ಪ್ರಸಕ್ತ ಆಡಳಿತಾವಧಿಯಲ್ಲೇ ಜಾರಿಗೊಳಿಸುವ ವಿಶ್ವಾಸ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಸುಧಾರಣಾ ಕ್ರಮ ಪಕ್ಷಾತೀತವಾಗಿ ಬೆಂಬಲವನ್ನು ಪಡೆಯುತ್ತದೆ ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಮೋದಿ ನೇತೃತ್ವದ ಎನ್ ಡಿಎ 3.0 ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದ್ದು, ಆಡಳಿತಾರೂಢ ಮೈತ್ರಿಕೂಟದ ಒಗ್ಗಟ್ಟು ಉಳಿದ ಅವಧಿಗೂ ಮುಂದುವರಿಯಲಿದೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.
"ಖಂಡಿತವಾಗಿಯೂ, ಈ ಅಧಿಕಾರಾವಧಿಯಲ್ಲಿಯೇ ಇದು ಕಾರ್ಯರೂಪಕ್ಕೆ ಬರಲಿದೆ. ಇದು ನಿಜವಾಗಲಿದೆ" ಎಂದು ಪಕ್ಷದ ಮೂಲವೊಂದು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದೆ. ಕಳೆದ ತಿಂಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿಯವರು 'ಒಂದು ರಾಷ್ಟ್ರ, ಒಂದು ಚುನಾವಣೆ' ಪರವಾಗಿ ಬಲವಾಗಿ ಮಾತನಾಡಿದ್ದರು. ಆಗಾಗ್ಗೆ ಚುನಾವಣೆಗಳು ದೇಶದ ಪ್ರಗತಿಯಲ್ಲಿ ಅಡಚಣೆಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರತಿಪಾದಿಸಿದ್ದರು.
'ಒಂದು ರಾಷ್ಟ್ರ, ಒಂದು ಚುನಾವಣೆ'ಗಾಗಿ ದೇಶ ಮುಂದೆ ಬರಬೇಕಿದೆ,'' ಎಂದು ಮೋದಿ ಕೆಂಪುಕೋಟೆಯ ಮೇಲಿನ ಭಾಷಣದಲ್ಲಿ ಹೇಳಿದ್ದರು. "ದೇಶದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ರಾಜಕೀಯ ಪಕ್ಷಗಳನ್ನು ಪ್ರಧಾನಿ ಒತ್ತಾಯಿಸಿದ್ದರು. ರಾಷ್ಟ್ರೀಯ ಸಂಪನ್ಮೂಲಗಳು ಜನಸಾಮಾನ್ಯರಿಗೆ ಬಳಕೆಯಾಗುವಂತೆ ಪಕ್ಷಗಳನ್ನು ಕೋರಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕನಸನ್ನು ನನಸಾಗಿಸಲು ನಾವು ಮುಂದಾಗಬೇಕು ಎಂದು ಕರೆ ನೀಡಿದ್ದರು.
'ಒಂದು ರಾಷ್ಟ್ರ, ಒಂದು ಚುನಾವಣೆ' ಎಂಬುದು ಬಿಜೆಪಿ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಮೊದಲ ಹಂತವಾಗಿ ಶಿಫಾರಸು ಮಾಡಿದೆ ಮತ್ತು ಇದಾದ ನಂತರ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸಲು ಸಲಹೆ ನೀಡಿದೆ.