ಶ್ರೀನಗರ: ಶ್ರೀನಗರದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನೆಯ ಭಾಗವಾಗಿ ಗಣಪತಿ ಪ್ರತಿಮೆಯ ಮೆರವಣಿಗೆ ಅದ್ಧೂರಿಯಿಂದ ನಡೆದಿದೆ.
ಹರಿ ಸಿಂಗ್ ಹೈ ಸ್ಟ್ರೀಟ್ ನಿಂದ ಸಂಗೀತದ ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಲಾಲ್ ಚೌಕ್ ನಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್ ಗೆ ತಲುಪಿತು.
ಭಕ್ತಾದಿಗಳು ನಂತರ ಹನುಮಾನ್ ಮಂದಿರದ ಬಳಿ ಝೇಲಂ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಿದರು. ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಡೋಲು, ತಾಳಗಳ ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಲ್ಕತ್ತಾ ನಿವಾಸಿ ಮಾಣಿಕ್ ಚತುರ್ದಾಸ್ ಮಾತನಾಡಿ, ಇಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು, ನಾವು ಇಲ್ಲಿ ವ್ಯಾಪಾರ ಮಾಡುತ್ತೇವೆ. ಇಂದು ನಮ್ಮ ಮರಾಠಿ ಸಹೋದರರು ಗಣಪತಿ ನಿಮಜ್ಜನ ಮೆರವಣಿಗೆಯನ್ನು ಆಯೋಜಿಸಿದ್ದಾರೆ. ಈ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು" ಎಂದು ಹೇಳಿದರು.