ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಅತಂತ್ರ ಫಲಿತಾಂಶ ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಸೀಟು ಹಂಚಿಕೆ ಒಪ್ಪಂದದ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ 51, ಕಾಂಗ್ರೆಸ್ 32 ಮತ್ತು ಸಿಪಿಐ(ಎಂ) ಒಂದು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಉಳಿದ ಆರು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಡುವೆ ಮೈತ್ರಿ ಏರ್ಪಟ್ಟಿದೆ.
ಪಕ್ಷದ ಝಾದಿಬಲ್ ಅಭ್ಯರ್ಥಿ ತನ್ವಿರ್ ಸಾದಿಕ್ ಅವರನ್ನು ಬೆಂಬಲಿಸಿ ದಾಲ್ ಲೇಕ್ ಬಳಿ ಶಿಕಾರಾ ರ್ಯಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ, ಬಿಜೆಪಿಯವರು ಏನು ತಂತ್ರ ಹೆಣೆಯುತ್ತಾರೆ ಎಂದು ನಮಗೆ ಗೊತ್ತಿಲ್ಲ, ಆದರೆ ಅತಂತ್ರ ವಿಧಾನಸಭೆ ಚುನಾವಣೆ ಫಲಿತಾಂಶ ಬರದಂತೆ ನಾವು ಜಾಗ್ರತೆ ವಹಿಸುತ್ತಿದ್ದೇವೆ ಎಂದರು.
ನಾವು ಚುನಾವಣೋತ್ತರ ಮೈತ್ರಿ ಮಾಡಬಹುದಿತ್ತು. ಆದರೆ ಜನರಿಗೆ ಒಂದು ಆಯ್ಕೆಯನ್ನು ನೀಡಲು (ಚುನಾವಣೆಯ ಮೊದಲು) ಮೈತ್ರಿಯನ್ನು ರಚಿಸಲಾಗಿದೆ, ಇದರಿಂದ ಅತಂತ್ರ ವಿಧಾನಸಭೆ ಫಲಿತಾಂಶಕ್ಕೆ ಎಡೆ ಇರುವುದಿಲ್ಲ ಮತ್ತು ಸರ್ಕಾರ ರಚನೆಯಾಗುವುದಿಲ್ಲ ಎಂಬ ಜನತೆಯ ಅನುಮಾನಕ್ಕೆ ಅವಕಾಶವಿಲ್ಲ ಎಂದರು.
ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಯನ್ನು ವಿಸ್ತರಿಸಲು ಬಿಜೆಪಿ ಅತಂತ್ರ ಫಲಿತಾಂಶವನ್ನು ಬಯಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಅತಂತ್ರ ಫಲಿತಾಂಶ ಬಯಸುತ್ತಿದೆ. ಆದರೆ ಜನರು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಬಿಜೆಪಿಯ ಉನ್ನತ ನಾಯಕರು ಜಮ್ಮುವಿನಲ್ಲಿರುವಂತೆ ಕಾಶ್ಮೀರದಲ್ಲಿ ಏಕೆ ಪ್ರಚಾರ ಮಾಡುತ್ತಿಲ್ಲ ಎಂದು ಕೇಳಿದಾಗ, ಕಣಿವೆಯಿಂದ ಏನನ್ನೂ ಪಡೆಯುವುದಿಲ್ಲ ಎಂದು ಕೇಸರಿ ಪಕ್ಷಕ್ಕೆ ತಿಳಿದಿದೆ ಎಂದರು.
ಬಿಜೆಪಿಗೆ ಕಾಶ್ಮೀರದಲ್ಲಿ ಏನೂ ಇಲ್ಲ, ಕಾಶ್ಮೀರದಿಂದ ಏನನ್ನೂ ಪಡೆಯುವುದಿಲ್ಲ. ಮುಸ್ಲಿಮರ ಬಗ್ಗೆ ಬಿಜೆಪಿಯ ಧೋರಣೆ ನಮಗೆ ಚೆನ್ನಾಗಿ ತಿಳಿದಿದೆ. ದೇಶದ ಶೇಕಡಾ 16ರಷ್ಟು ಜನಸಂಖ್ಯೆಯು ಮುಸ್ಲಿಮರಾಗಿದ್ದು, ಅವರಿಗೆ ಒಬ್ಬರನ್ನೂ ಹುಡುಕಲಾಗಲಿಲ್ಲ. ಈ ಜನಸಂಖ್ಯೆಗೆ ಯಾವುದೇ ಪ್ರಾತಿನಿಧ್ಯವಿಲ್ಲದಿರುವಾಗ, ಅವರು ಮುಸ್ಲಿಮರ ಬಗ್ಗೆ ಯಾವ ರೀತಿಯ ಚಿಂತನೆಯನ್ನು ಹೊಂದಿದ್ದಾರೆಂದು ಗೊತ್ತಾಗುತ್ತದೆ ಎಂದರು.
ಬಿಜೆಪಿ ತನ್ನ ವೈಫಲ್ಯಗಳನ್ನು ಮರೆಮಾಚಲು ಜಮ್ಮು ಮತ್ತು ಕಾಶ್ಮೀರದಲ್ಲಿ "ಮೂರು ಕುಟುಂಬಗಳ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದೆ ಎಂದು ಸಹ ಆರೋಪಿಸಿದರು.
ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಏನೂ ಸಿಕ್ಕಿಲ್ಲ, ಬಿಜೆಪಿಗೆ ತೋರಿಸಲು ಏನೂ ಇಲ್ಲ, ಆದ್ದರಿಂದ ಪ್ರಧಾನಿ ಮತ್ತು ಗೃಹ ಸಚಿವರು ಮೂರು ಕುಟುಂಬಗಳನ್ನು ಗುರಿಯಾಗಿಸಲು ಒತ್ತಾಯಿಸಿದ್ದಾರೆ, ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ 2014 ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷ ಕಡಿಮೆ ಮತದಾನದ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದರು.
ನಾಳೆ ರಾಹುಲ್ ಗಾಂಧಿಯವರ ಕಾಶ್ಮೀರ ಭೇಟಿಯ ಕುರಿತು ಕೇಳಲಾದ ಪ್ರಶ್ನೆಗೆ, ಬಿಜೆಪಿಯನ್ನು ಎದುರಿಸಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಒಂದೆರಡು ಸಲ ಭೇಟಿ ನೀಡಬೇಕು ಎಂದರು. ರಾಹುಲ್ ಗಾಂಧಿ ಬರುವುದು ಒಳ್ಳೆಯದು, ಬಿಜೆಪಿ ವರಿಷ್ಠರನ್ನು ತರಾಟೆಗೆ ತೆಗೆದುಕೊಳ್ಳಲು ಅವರು ಹೆಚ್ಚಾಗಿ ಬರಬೇಕೆಂದು ನಾನು ಬಯಸುತ್ತೇನೆ. ಪ್ರಧಾನಿ ಎರಡು ಬಾರಿ ಭೇಟಿ ನೀಡಿದ್ದಾರೆ, ಗೃಹ ಸಚಿವರು ಮೂರು ಬಾರಿ ಭೇಟಿ ನೀಡಿದ್ದಾರೆ, ರಕ್ಷಣಾ ಸಚಿವರಿಗೆ ಸುಸ್ತಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲೆಲ್ಲಿ ಸ್ಪರ್ಧಿಸುತ್ತಾರೋ ಅಲ್ಲೆಲ್ಲಾ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ ಎಂದು ಒಮರ್ ಅಬ್ದುಲ್ಲಾ ಹೇಳಿದರು.