ಮಥುರಾ: ಮಹಾರಾಷ್ಟ್ರದಲ್ಲಿ ಸಾವಿರಾರು ಜನರಿಗೆ ರೂ. 300 ಕೋಟಿಗೂ ಅಧಿಕ ವಂಚಿಸಿದ್ದ ವ್ಯಕ್ತಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ಮಥುರಾದಲ್ಲಿ ಸ್ವಾಮೀಜಿ ಸೋಗಿನಲ್ಲಿ ವಾಸಿಸುತ್ತಿದ್ದುದನ್ನು ಪತ್ತೆ ಹಚ್ಚಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ವೃಂದಾವನದ ಕೃಷ್ಣ ಬಲರಾಮ ದೇವಸ್ಥಾನದ ಬಳಿ ವೃಂದಾವನ ಮತ್ತು ಬೀಡ್ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಬನ್ ವಿಶ್ವನಾಥ್ ಶಿಂಧೆ ಅವರನ್ನು ಬಂಧಿಸಿದ್ದಾರೆ.
ಸುಮಾರು ರೂ. 300 ಕೋಟಿಗೂ ಅಧಿಕ ವಂಚನೆಯಲ್ಲಿ ಹಲವು ಎಫ್ ಐಐರ್ ಗಳಿಗೆ ಸಂಬಂಧಿಸಿದಂತೆ ಶಿಂಧೆ ಪೊಲೀಸರಿಗೆ ಬೇಕಾಗಿದ್ದಾರೆ ಎಂದು ಮಥುರಾ ಪೊಲೀಸರು ತಿಳಿಸಿದ್ದಾರೆ.
ಶಿಂಧೆ ಸ್ವಾಮೀಜಿ ಸೋಗಿನಲ್ಲಿ ದೆಹಲಿ, ಅಸ್ಸಾಂ, ನೇಪಾಳ ಮತ್ತು ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ. ಕೊನೆಗೆ ಆತ ವೃಂದಾವನದಲ್ಲಿ ಅಡಗಿರುವುದು ಕಂಡುಬಂದಿತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ಬಂಧಿಸಲಾಗಿದ್ದ ಶಿಂಧೆ ಅವರನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಬುಧವಾರ ಹಾಜರುಪಡಿಸಲಾಯಿತು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಪರಾಧ ವಿಭಾಗದ ತಂಡವು ಮಥುರಾ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಆತನನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.