ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಗಡಿಯಾಚೆಗಿನ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವುದಾಗಿ ಬಿಎಸ್‌ಎಫ್ ವಕ್ತಾರರು ಶನಿವಾರ ತಿಳಿಸಿದ್ದಾರೆ.
ಆರ್‌ಎಸ್ ಪುರ ಸೆಕ್ಟರ್‌ನ ಅಬ್ದುಲಿಯನ್ ಗಡಿ ಔಟ್ ಪೋಸ್ಟ್ ನಲ್ಲಿ ಒಳ ನುಸುಳುಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಏಪ್ರಿಲ್ 4 ಮತ್ತು 5 ರ ಮಧ್ಯರಾತ್ರಿಯಲ್ಲಿ ಜಮ್ಮು ಗಡಿ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನಗಳು ಹಾಗೂ ಒಳನುಸುಳುಕೋರನೋರ್ವ ಅಂತಾರಾಷ್ಟ್ರೀಯ ಗಡಿ ದಾಟುತ್ತಿರುವುದು ತಿಳಿದುಬಂದಿತು. ಬಿಎಸ್ ಎಫ್ ಪಡೆ ಎಚ್ಚರಿಕೆ ನೀಡಿದರೂ ಒಳನುಸುಳುಕೋರ ಅಂತಾರಾಷ್ಟ್ರೀಯ ಗಡಿಯತ್ತ ನುಗಿದ್ದಾಗ ಗುಂಡಿಕ್ಕಿ ಆತನನ್ನು ಹತ್ಯೆ ಮಾಡಲಾಯಿತು ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಈ ಸಂಬಂಧ ಪಾಕಿಸ್ತಾನದೊಂದಿಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಲಾಗುತ್ತಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮತ್ತಿತರ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಸ್ಥಳದಿಂದ ಸ್ಥಳಾಂತರಿಸಲಾಗಿದೆ ಎಂದು ಬಿಎಸ್ ಎಫ್ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.