ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನದ ಸುಗಮ ಸಂಚಾರಕ್ಕಾಗಿ ವಿಧಿಸಲಾಗಿ ಸಂಚಾರ ನಿರ್ಬಂಧದಿಂದ ತಡವಾಗಿ ಬಂದ 25 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನಿನ್ನೆ ಸೋಮವಾರ ವಿಶಾಖಪಟ್ಟಣದಲ್ಲಿ ನಡೆದ ನಿರ್ಣಾಯಕ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗದೆ ನಿರ್ಬಂಧಿಸಿದ ಘಟನೆ ನಡೆದಿದೆ.
ಪೆಂಡುರ್ತಿಯ ಚಿನ್ನಮುಸಿಡಿವಾಡದಲ್ಲಿರುವ ಐಒಎನ್ ಡಿಜಿಟಲ್ ವಲಯ ಕಟ್ಟಡದಲ್ಲಿ ಬೆಳಗ್ಗೆ 8.30 ಕ್ಕೆ ಪರೀಕ್ಷೆ ಪ್ರಾರಂಭವಾಗಬೇಕಿತ್ತು. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಿಗೆ (NITs) ಪ್ರವೇಶವನ್ನು ನಿರ್ಧರಿಸುವ ಜಂಟಿ ಪ್ರವೇಶ ಪರೀಕ್ಷೆ (Main)ಗೆ ಹಾಜರಾಗಿದ್ದ ತನ್ನ ಪುತ್ರ ಪವನ್ ಕಲ್ಯಾಣ್ ಅವರ ಬೆಂಗಾವಲು ವಾಹನ ಸಂಚಾರಕ್ಕೆ ವಿಧಿಸಿದ ಟ್ರಾಫಿಕ್ ನಿರ್ಬಂಧದಿಂದ ತನ್ನ ಮಗ ಪರೀಕ್ಷೆಗೆ ತಡವಾಗಿ ಹಾಜರಾದ ಎಂದು ವಿದ್ಯಾರ್ಥಿಯ ತಾಯಿ ಬಿ ಕಲಾವತಿ ಬೇಸರದಿಂದ ನುಡಿದಿದ್ದಾರೆ.
ನಾವು ನಿನ್ನೆ ಪರೀಕ್ಷೆಗೆ ಹೋಗುವ ಮಧ್ಯೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೆವು. ಪವನ್ ಕಲ್ಯಾಣ್ ಅರಕುಗೆ ಹೋಗುತ್ತಿದ್ದ ಕಾರಣ ನಾವು ಹೋಗುತ್ತಿದ್ದ ವಾಹನವನ್ನು ನಿಲ್ಲಿಸಲಾಯಿತು ಎಂದು ಕಲಾವತಿ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಅವರ ಪ್ರಕಾರ, ಅವರು ಬೆಳಗ್ಗೆ 7.50 ಕ್ಕೆ ಎನ್‌ಎಡಿ ಜಂಕ್ಷನ್ ತಲುಪಿದ್ದರು. ಪರೀಕ್ಷಾ ಕೇಂದ್ರಕ್ಕೆ ಉಳಿದ ದೂರವನ್ನು ಕ್ರಮಿಸಲು 42 ನಿಮಿಷಗಳನ್ನು ತೆಗೆದುಕೊಂಡರು, ತುಂಬಾ ತಡವಾಗಿ ಹೋಗಿದ್ದ ಕಾರಣ ಪರೀಕ್ಷಾ ಕೊಠಡಿಗೆ ಬಿಡಲಿಲ್ಲ. ಇದರಿಂದ ಸುಮಾರು 30 ವಿದ್ಯಾರ್ಥಿಗಳು ತೊಂದರೆಗೀಡಾದರು. ನಾವು ಪದೇ ಪದೇ ಮನವಿ ಮಾಡಿದರೂ ಒಳಗೆ ಬಿಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮತ್ತೊಬ್ಬ ಪೋಷಕ ಅನಿಲ್ ಕುಮಾರ್, ಪರೀಕ್ಷಾ ಕೇಂದ್ರದಲ್ಲಿ ಐದು ನಿಮಿಷಗಳ ವಿನಾಯಿತಿ ನೀಡಿದ್ದರೂ ಸಹ, ತಮ್ಮ ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿತ್ತು ಎನ್ನುತ್ತಾರೆ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಬಂದು ಹೋಗುತ್ತಾರೆ, ಆದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಮಾಹಿತಿ ನೀಡಿ ಐದು ನಿಮಿಷಗಳ ವಿನಾಯಿತಿ ನೀಡಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.
ತಮ್ಮ ಮಗಳು ಬೆಳಗ್ಗೆ 8.32 ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದರೂ, ಎರಡು ನಿಮಿಷ ತಡವಾಗಿ ಬಂದ ಕಾರಣ ಪ್ರವೇಶ ನಿರಾಕರಿಸಲಾಗಿದೆ ಎಂದು ಕುಮಾರ್ ಎನ್ನುವವರು ಅಳಲು ತೋಡಿಕೊಂಡರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪೋಷಕರು, ಸಂತ್ರಸ್ತ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮರು ನಿಗದಿಪಡಿಸುವ ಬಗ್ಗೆ ಪರಿಗಣಿಸುವಂತೆ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ಮಧ್ಯೆ, ವಿಶಾಖಪಟ್ಟಣ ಪೊಲೀಸರು ಪೋಷಕರ ಮಾತನ್ನು ನಿರಾಕರಿಸುತ್ತಾರೆ. ಉಪ ಮುಖ್ಯಮಂತ್ರಿಗಳು ಬೆಳಗ್ಗೆ 8.41 ಕ್ಕೆ ಆ ಪ್ರದೇಶದಲ್ಲಿ ಓಡಾಡಿದ್ದಕ್ಕೂ ವಿದ್ಯಾರ್ಥಿಗಳು ತಡವಾಗಿ ಬಂದಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ವಿದ್ಯಾರ್ಥಿಗಳು ಬೆಳಗ್ಗೆ 8.30ರೊಳಗೆ ಪರೀಕ್ಷೆಗೆ ಹಾಜರಾಗಬೇಕಿತ್ತು. ಅದಲ್ಲದೆ ಪರೀಕ್ಷೆಗೆ ಬಾರದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ, ಉಳಿದ ವಿದ್ಯಾರ್ಥಿಗಳು ಹಾಗಾದರೆ ಹೇಗೆ ಪರೀಕ್ಷೆಗೆ ಬಂದರು ಎಂದು ಕೇಳುತ್ತಾರೆ.
ಇದಲ್ಲದೆ, ಬಿಆರ್‌ಟಿಎಸ್ ರಸ್ತೆ ಅಥವಾ ಗೋಪಾಲಪಟ್ಟಣಂ ಮತ್ತು ಪೆಂಡುರ್ತಿ ನಡುವಿನ ಸೇವಾ ರಸ್ತೆಗಳಲ್ಲಿ ಬೆಳಗ್ಗೆ 8.30 ಕ್ಕಿಂತ ಮೊದಲು ಯಾವುದೇ ಸಮಯದಲ್ಲಿ ಯಾವುದೇ ಸಂಚಾರವನ್ನು ನಿರ್ಬಂಧಿಸಲಾಗಿಲ್ಲ, ಇದರಿಂದಾಗಿ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮುಕ್ತವಾಗಿ ಹೋಗಬಹುದು, ಏಕೆಂದರೆ ಇದು ಸರ್ವಿಸ್ ರಸ್ತೆಯ ಪಕ್ಕದಲ್ಲಿದೆ ಎಂದು ಪೊಲೀಸರು ಹೇಳುತ್ತಾರೆ.