ತೃಣಮೂಲ ಕಾಂಗ್ರೆಸ್ ಸಂಸದರಿಬ್ಬರ ನಡುವಿನ ವಾಟ್ಸ್ ಆಪ್ ಚಾಟ್ ಜಗಳದ ಸ್ಕ್ರೀನ್ ಶಾಟ್ ನ್ನು ಬಿಜೆಪಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಏ.4 ರಂದು ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲು ತೆರಳಿದ್ದ ಟಿಎಂಸಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ ಹಾಗೂ ಕೀರ್ತಿ ಆಜಾದ್ (ಮಾಜಿ ಕ್ರಿಕೆಟಿಗ) ನಡುವೆ ಇಸಿಐ ಕಚೇರಿಯಲ್ಲೇ ವಾಗ್ವಾದ ನಡೆದಿತ್ತು. ಇದು ಬಳಿಕ ಪಕ್ಷದ ವಾಟ್ಸ್ ಆಪ್ ಗ್ರೂಪ್ ನಲ್ಲಿಯೂ ಮುಂದುವರೆದಿದೆ. ಸಂಸದರ ನಡುವಿನ ಚಾಟಿಂಗ್ ನಲ್ಲಿ ಬಹುಮುಖ ಪ್ರತಿಭೆಯ ಅಂತಾರಾಷ್ಟ್ರೀಯ ಮಹಿಳೆಯ ಉಲ್ಲೇಖಗೊಂಡಿದ್ದು, ಅದು ಯಾರು ಎಂಬುದು ಈಗ ಈ ವಿಷಯದ ಕೇಂದ್ರಬಿಂದುವಾಗಿ ಚರ್ಚೆಯಾಗುತ್ತಿದೆ.
ಸ್ಕ್ರೀನ್ ಶಾಟ್ ಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಲ್ವಿಯ ಚುನಾವಣಾ ಆಯೋಗಕ್ಕೆ ಭೇಟಿ ನೀಡುವುದಕ್ಕೂ ಮೊದಲು ಮನವಿ ಪತ್ರಕ್ಕೆ ಸಹಿ ಹಾಕುವುದಕ್ಕಾಗಿ ಸಂಸತ್ ಕಚೇರಿಯಲ್ಲಿ ಸೇರಲು ಸಂಸದರಿಗೆ ಪಕ್ಷ ಸೂಚನೆ ನೀಡಿತ್ತು ಎಂದು ತೋರುತ್ತದೆ. ಆದರೆ ಸಂಸತ್ ನಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಬಿಟ್ಟು, ಮೆಮರಂಡಮ್ ನ್ನು ಹೊಂದಿದ್ದ ಸಂಸದ ನೇರವಾಗಿ ಚುನಾವಣಾ ಆಯೋಗಕ್ಕೆ ತೆರಳಿದ್ದಾರೆಂದು ಅಮಿತ್ ಮಾಲ್ವಿಯ ಹೇಳಿದ್ದಾರೆ.
ಸಭೆಗೆ ಗೈರಾಗಿ ನೇರವಾಗಿ ಆಯೋಗಕ್ಕೆ ಹೋದ ಸಂಸದರ ಈ ನಡೆ ಮತ್ತೋರ್ವ ಸಂಸದರಿಗೆ ಅಸಮಾಧಾನ ಮೂಡಿಸಿದ್ದು, ವಾಗ್ವಾದಕ್ಕೆ ಕಾರಣವಾಗಿ, ಪೊಲೀಸರು ಮಧ್ಯಪ್ರವೇಶಿಸಿ ತಣ್ಣಗಾಗಿಸಬೇಕಾಯಿತು. ಇದು ಇಷ್ಟಕ್ಕೆ ಮುಗಿಯದೇ ಎಐಟಿಸಿಎಂಪಿ 2024 ಎಂಬ ವಾಟ್ಸ್ ಆಪ್ ಗ್ರೂಪ್ ನಲ್ಲಿಯೂ ಸಂಸದ ಕಲ್ಯಾಣ್ ಬ್ಯಾನರ್ಜಿ ಹಾಗೂ ಕೀರ್ತಿ ಆಜಾದ್ ಈ ಬಗ್ಗೆ ಕಿತ್ತಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಇದು ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡುವ ಹಂತಕ್ಕೆ ಹೋಗಿದೆ.
ಕಲ್ಯಾಣ್ ಬ್ಯಾನರ್ಜಿ ಆಜಾದ್ ನ್ನು ಟಾರ್ಗೆಟ್ ಮಾಡಿ ವಾಟ್ಸ್ ಆಪ್ ನಲ್ಲಿ ಹೀಗೆ ಬರೆದಿದ್ದಾರೆ, "ಇಂದು ನಾನು ಬಹುಮುಖ ಪ್ರತಿಭೆಯ ಅಂತರರಾಷ್ಟ್ರೀಯ ಮಹಿಳೆಯ ಸುಂದರ ಚಟುವಟಿಕೆಗಳಿಗೆ ನಾಂದಿ ಹಾಡಿದ ಆ ಸಂಭಾವಿತ ವ್ಯಕ್ತಿಯನ್ನು ಅಭಿನಂದಿಸುತ್ತೇನೆ. ಆ ದಿನ ಅವಳ ಒಬ್ಬ ಗೆಳೆಯನೂ ಅವಳ ಬೆನ್ನಿಗೆ ನಿಲ್ಲಲಿಲ್ಲ. ಬಿಎಸ್‌ಎಫ್‌ನಿಂದ ಬಂಧಿಸಬೇಕೆಂದು ಅವಳು ಬಯಸಿದ್ದ ಆ ಮೂರ್ಖ ವ್ಯಕ್ತಿ ಅವಳ ಬೆನ್ನಿಗೆ ನಿಂತನು. ಇಂದು 30 ವರ್ಷಗಳ ಪ್ರಸಿದ್ಧ ಆಟಗಾರ ನನ್ನನ್ನು ಬಂಧಿಸಲು ಅವಳ ಬೆನ್ನಿಗೆ ನಿಂತರು" ಎಂದು ಕುಟುಕಿದ್ದಾರೆ.
ಏತನ್ಮಧ್ಯೆ, ಆಜಾದ್ ತಮ್ಮ ಪ್ರತಿಕ್ರಿಯೆಯಲ್ಲಿ, "ನಿರಾಶಾದಾಯಕವಾಗಿರಿ ಕಲ್ಯಾಣ್. ಎಳೆಯ ವ್ಯಕ್ತಿಯಂತೆ ವರ್ತಿಸಬೇಡಿ. ದೀದಿ ನಿಮ್ಮೊಂದಿಗೆ ಎಲ್ಲರಿಗೂ ಬಹಳ ಗಂಭೀರವಾದ ಜವಾಬ್ದಾರಿಯನ್ನು ವಹಿಸಿದ್ದಾರೆ. ಆದ್ದರಿಂದ ವಿಶ್ರಾಂತಿ ಪಡೆಯಿರಿ, ಚೆನ್ನಾಗಿ ನಿದ್ರೆ ಮಾಡಿ. ನಿಮ್ಮೊಂದಿಗೆ ಜಗಳವಾಡಲು ನನಗೆ ಯಾವುದೇ ಅಸ್ತ್ರ ಇಲ್ಲ. ರಾಜಕೀಯದಲ್ಲಿ ಅಲ್ಲ, ವಯಸ್ಸಿನಲ್ಲಿ ಹಿರಿಯರಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ನಿಮ್ಮ ಬಾಲಿಶ ಮತ್ತು ಅನಿಯಮಿತ ನಡವಳಿಕೆಯನ್ನು ನಿಲ್ಲಿಸಿ. ಪ್ರನುದ್ಧರಂತೆ ವರ್ತಿಸಿ. ಯಾರನ್ನೂ ಪ್ರಚೋದಿಸಬೇಡಿ. ತಂಪಾದ ಮನಸ್ಸಿನಿಂದ ಯೋಚಿಸಿ. ಶುಭ ರಾತ್ರಿ." ಎಂದು ಹೇಳಿದ್ದಾರೆ.
ಈ ಚಾಟ್ ನಲ್ಲಿ ಕಲ್ಯಾಣ್ ಬ್ಯಾನರ್ಜಿ ಉಲ್ಲೇಖಿಸಿರುವ ಬಹುಮುಖ ಪ್ರತಿಭೆಯ ಅಂತರರಾಷ್ಟ್ರೀಯ ಮಹಿಳೆ ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಚರ್ಚೆಯೂ ಜೋರಾಗಿ ನಡೆದಿದೆ.