ಪಾಟ್ನಾ: ಬಿಹಾರದ ಗಯಾ ಜಿಲ್ಲೆಯಲ್ಲಿ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳನ್ನು ಅವರ ಪತಿಯೇ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮೃತರನ್ನು ಗಯಾ ಜಿಲ್ಲೆಯ ಟೆಟುವಾ ಗ್ರಾಮದ ನಿವಾಸಿ ಸುಷ್ಮಾ ದೇವಿ ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಚಾಲಕರಾಗಿರುವ ಸುಷ್ಮಾ ಅವರ ಪತಿ ರಮೇಶ್ ಮಂಗಳವಾರ ತಡರಾತ್ರಿ ಮನೆಗೆ ಆಗಮಿಸಿದ್ದು, ಈ ವೇಳೆ ಅವರ ಕೋಣೆಯಲ್ಲಿ ಯುವಕನೊಬ್ಬನನ್ನು ನೋಡಿ ಆಕ್ರೋಶಗೊಂಡಿದ್ದಾರೆ. ಪತಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಜಗಳ ಮಾಡಿದ್ದಾರೆ. ಈ ವೇಳೆ ಸುಷ್ಮಾ, ಪತಿ ರಮೇಶ್ ಅವರನ್ನು ಸಮಾಧಾನಪಡಿಸಲು ಯತ್ನಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ.
ಕೆಲವು ನಿಮಿಷಗಳ ನಂತರ, ರಮೇಶ್ ದೇಶಿ ನಿರ್ಮಿತ ಪಿಸ್ತೂಲಿನಿಂದ ಸುಷ್ಮಾ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡು, ಪ್ರಜ್ಞೆ ತಪ್ಪಿದ ಅವರನ್ನು ತಕ್ಷಣ ಗಯಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುಷ್ಮಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಮಧ್ಯೆ ರಮೇಶ್ ಪಿಸ್ತೂಲ್ ಅನ್ನು ಕೋಣೆಯಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ.
"ನಾನು ಮತ್ತು ನನ್ನ ಸಹೋದರಿಯ ಮಕ್ಕಳು ಪ್ರತ್ಯೇಕ ಕೋಣೆಯಲ್ಲಿದ್ದೆವು. ಗಂಡ ಹೆಂಡತಿ ನಡುವೆ ಯಾವುದೋ ವಿಷಯಕ್ಕೆ ಜಗಳವಾಯಿತು. ಜಗಳದ ಸಮಯದಲ್ಲಿ, ರಮೇಶ್ ಪಿಸ್ತೂಲ್ ತೆಗೆದುಕೊಂಡು ನನ್ನ ಸಹೋದರಿಯ ಮೇಲೆ ಗುಂಡು ಹಾರಿಸಿದರು" ಎಂದು ಸುಷ್ಮಾ ಅವರ ಸಹೋದರಿ ಪೂನಂ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಗುಂಡೇಟಿನ ಶಬ್ದ ಕೇಳಿದ ನಂತರ ನಾನು ಸುಷ್ಮಾ ಅವರ ಕೋಣೆಗೆ ಧಾವಿಸಿದೆ. ನನ್ನ ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅವಳು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ" ಎಂದು ಪೂನಂ ಹೇಳಿದ್ದಾರೆ.
ಗಯಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ಆನಂದ್ ಕುಮಾರ್ ಮಾತನಾಡಿ, ಪತಿ ರಮೇಶ್ ನನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಘಟನೆಯ ನಂತರ ಆತ ಪರಾರಿಯಾಗಿದ್ದಾನೆ. ಅಪರಾಧಕ್ಕೆ ಬಳಸಲಾದ ಪಿಸ್ತೂಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸುಷ್ಮಾ ಮತ್ತು ರಮೇಶ್ ವಿಭಿನ್ನ ಜಾತಿಗಳಿಗೆ ಸೇರಿದವರಾಗಿದ್ದು, ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದರು ಎಂದು ಮೂಲಗಳು ತಿಳಿಸಿವೆ.