ಲಕ್ನೋ: ವಕೀಲರ ಉಡುಪು ಧರಿಸದೆ ಮತ್ತು ಶರ್ಟ್ ಗುಂಡಿ ಹಾಕದೆಯೇ ನ್ಯಾಯಾಲಯಕ್ಕೆ ಹಾಜರಾದ ಕಾರಣಕ್ಕಾಗಿ ಅಲಹಾಬಾದ್ ಹೈಕೋರ್ಟ್ ಸ್ಥಳೀಯ ವಕೀಲರೊಬ್ಬರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
2021ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗೆ ಹಾಜರಾದ ವಕೀಲ ಅಶೋಕ್ ಪಾಂಡೆ ಎಂಬುವವರಿಗೆ ನ್ಯಾಯಾಲಯ ಶಿಕ್ಷೆ ನೀಡಿದೆ.
ವಕೀಲರು ಸರಿಯಾದ ಸಮವಸ್ತ್ರವಿಲ್ಲದೆ ನ್ಯಾಯಾಲಯಕ್ಕೆ ಹಾಜರಾಗಿದ್ದನ್ನು ನ್ಯಾಯಾಲಯ ಸ್ವಯಂಪ್ರೇರಿತವಾಗಿ ಗಮನಿಸಿದೆ. ನ್ಯಾಯಾಧೀಶರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ನ್ಯಾಯಾಲಯದಿಂದ ಹೊರಹೋಗುವಂತೆ ಹೇಳಿದ ನ್ಯಾಯಾಧೀಶರನ್ನು 'ಗೂಂಡಾಗಳು' ಎಂದು ಕರೆದಿದ್ದಾರೆ.
ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಬಿಆರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಶಿಕ್ಷೆಯನ್ನು ಅನುಭವಿಸಲು ಲಕ್ನೋ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶರಣಾಗಲು ವಕೀಲರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಇದರೊಂದಿಗೆ 2,000 ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸೂಚಿಸಿದೆ.
ಇದಲ್ಲದೆ, ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಖನೌ ಪೀಠದಲ್ಲಿ ವಕೀಲಿ ವೃತ್ತಿಯಿಂದ ನಿಮ್ಮನ್ನು ಏಕೆ ನಿರ್ಬಂಧಿಸಬಾರದು ಎಂದು ಪ್ರಶ್ನಿಸಿ, ವಕೀಲರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಪೀಠವು, ಮೇ 1ರವರೆಗೆ ಪ್ರತಿಕ್ರಿಯಿಸಲು ಅವಕಾಶ ನೀಡಿದೆ.
ಈಮಧ್ಯೆ, ವಕೀಲರ ಹಿಂದಿನ ನಡವಳಿಕೆ ಮತ್ತು ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದನ್ನು ಗಮನದಲ್ಲಿಟ್ಟುಕೊಂಡು ಪಾಂಡೆ ಅವರಿಗೆ ಇತರರಿಗೂ ಪಾಠವಾಗುವಂತೆ ಶಿಕ್ಷೆ ನೀಡಲಾಗಿದೆ ಎಂದು ಪೀಠ ತಿಳಿಸಿದೆ.
ಪಾಂಡೆ ಅವರ ಹಿಂದಿನ ನಡವಳಿಕೆಯನ್ನು ಗಮನಿಸಿ ಈ ಹಿಂದೆಯೂ ಹಲವಾರು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿತ್ತು ಮತ್ತು 2017 ರಲ್ಲಿಯೂ ಸಹ ಅವರಿಗೆ ಅಲಹಾಬಾದ್ ಹೈಕೋರ್ಟ್ ಮತ್ತು ಅದರ ಲಕ್ನೋ ಪೀಠದ ಆವರಣಕ್ಕೆ ಎರಡು ವರ್ಷಗಳ ಕಾಲ ಪ್ರವೇಶಿಸುವುದನ್ನು ನಿರ್ಬಂಧಿಸಲಾಯಿತು.