ನವದೆಹಲಿ: 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯವು ಬಿಜೆಪಿ ಮತ್ತು ಅದರ ಅವಕಾಶವಾದಿ ಮೈತ್ರಿಕೂಟದಿಂದ ಮುಕ್ತವಾಗಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಲು ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಯಲ್ಲಿ ರಾಷ್ಟ್ರೀಯ ಜನತಾದಳ ನಾಯಕ ತೇಜಸ್ವಿ ಯಾದವ್ ಮತ್ತು ಇತರರನ್ನು ಭೇಟಿ ಮಾಡುವ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಾರಿ ಬಿಹಾರದಲ್ಲಿ ಬದಲಾವಣೆ ಖಚಿತ. ಇಂದು ನಾವು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ ಮಹಾಘಟಬಂಧನವನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಮುಂಬರುವ ಚುನಾವಣೆಯಲ್ಲಿ, ನಾವು ಬಿಹಾರದ ಜನರಿಗೆ ಬಲವಾದ, ಸಕಾರಾತ್ಮಕ, ನ್ಯಾಯಯುತ ಮತ್ತು ಕಲ್ಯಾಣ-ಆಧಾರಿತ ಆಯ್ಕೆಯ ಸರ್ಕಾರವನ್ನು ನೀಡುತ್ತೇವೆ. ಬಿಹಾರವನ್ನು ಬಿಜೆಪಿ ಮತ್ತು ಅದರ ಅವಕಾಶವಾದಿ ಮೈತ್ರಿಕೂಟದಿಂದ ಮುಕ್ತಗೊಳಿಸಲಾಗುವುದು ಎಂದರು.
ಯುವಕರು, ರೈತರು-ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ಅತ್ಯಂತ ಹಿಂದುಳಿದವರು ಮತ್ತು ಸಮಾಜದ ಎಲ್ಲಾ ಇತರ ವರ್ಗಗಳ ಜನರು ಮಹಾಘಟಬಂಧನ ಸರ್ಕಾರವನ್ನು ಬಯಸುತ್ತಾರೆ ಎಂದರು.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲು ಕಾಂಗ್ರೆಸ್‌ನ ಉನ್ನತ ನಾಯಕತ್ವವನ್ನು ಇಂದು ಭೇಟಿಯಾದ ನಂತರ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ವಿರೋಧ ಪಕ್ಷಗಳ ಮೈತ್ರಿಕೂಟ ಒಗ್ಗಟ್ಟಾಗಿದ್ದು, ಬಿಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ.