ಹರ್ಯಾಣ: ಹರಿಯಾಣದ ಯಮುನಾನಗರಕ್ಕೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹುಕಾಲದ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಆ ಅಭಿಮಾನಿಯ 14 ವರ್ಷಗಳ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ.
14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂದು ರಾಂಪಾಲ್ ಕಶ್ಯಪ್ ಅತೀ ದೊಡ್ಡ ಶಪಥ ಮಾಡಿದ್ದರು. ಕಾಲಿಗೆ ಚಪ್ಪಲಿ ಧರಿಸದೆ ಬರಿಗಾಲಲ್ಲಿ ಓಡಾಡುವುದಾಗಿ ಶಪಥ ಮಾಡಿದ್ದರು. ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೂ ರಾಂಪಾಲ್ ಕಶ್ಯಪ್ ಶಪಥ ಹಾಗೇ ಮುಂದುವರಿಸಿದ್ದರು. ಮೋದಿ ಪ್ರಧಾನಿಯಾಗಿ ಮತ್ತಷ್ಟು ಕಾಲ ಆಡಳಿತ ನಡೆಸಬೇಕು, ಅಭಿವೃದ್ಧಿ ಮಾಡಬೇಕು ಅನ್ನೋದು ರಾಂಪಲ್ ಮನದಾಸೆಯಾಗಿದೆ. ಹೀಗಾಗಿ ಬರಿಗಾಲಲ್ಲೇ ಓಡಾಡುತ್ತಿದ್ದ ರಾಂಪಾಲ್‌ನನ್ನು ಮೋದಿ ಭೇಟಿಯಾಗಿದ್ದಾರೆ.
ಮೋದಿ ಅವರು ರಾಂಪಾಲ್ ಅವರೊಂದಿಗಿನ ಭೇಟಿಯ ವಿಡಿಯೊವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ವೇಳೆ ರಾಂಪಾಲ್ ಅವರಿಗೆ ಹೊಸ ಶೂ ನೀಡಿದ ಪ್ರಧಾನಿ ಮೋದಿ, ಶೂ ಹಾಕಲು ಅವರಿಗೆ ಸಹಾಯ ಮಾಡಿದ್ದಾರೆ.
'ಯಮುನಾನಗರದಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ, ನಾನು ಕೈತಾಲ್‌ನ ರಾಂಪಾಲ್ ಕಶ್ಯಪ್ ಅವರನ್ನು ಭೇಟಿಯಾದೆ. ನಾನು ಪ್ರಧಾನಿಯಾದ ನಂತರ ಹಾಗೂ ನನ್ನನ್ನು ಭೇಟಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ 14 ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ರಾಂಪಾಲ್ ಅವರಂತಹ ಜನರ ಪ್ರೀತಿಗೆ ನಾನು ಸದಾ ಆಭಾರಿ' ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ರಾಂಪಾಲ್ ಅವರಂತಹ ಜನರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಅಂತಹ ಪ್ರತಿಜ್ಞೆ ಮಾಡುವ ಬದಲು ಅವರು ಸಾಮಾಜಿಕ ಕಾರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ನಾನು ವಿನಂತಿಸುತ್ತೇನೆ' ಎಂದೂ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಂಪಾಲ್ ಕಶ್ಯಪ್ ನೋಡಿದ ಕೂಡಲೇ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆ, ಯಾಕೇ ರೀತಿ ಮಾಡಿದ್ದೀರಿ, ನಿಮಗೆ ನೀವು ಯಾಕೆ ಈ ರೀತಿ ಕಷ್ಟ ಕೊಡುತ್ತೀರಿ ಎಂದು ಮೋದಿ ಕೇಳಿದ್ದಾರೆ. ಒಂದು ಕ್ಷಣ ಏನು ಉತ್ತರಿಸಬೇಕು ಅನ್ನೋದೇ ತಿಳಿಯದ ರಾಂಪಾಲ್ ಕಶ್ಯಪ್, ನೀವು ಪ್ರಧಾನಿಯಾಗಬೇಕು, ಅಧಿಕಾರ ನಡೆಸಬೇಕು ಅನ್ನೋ ಹಂಬಲದಲ್ಲಿ ಈ ಶಪಥ ಮಾಡಿದ್ದೇನೆ. ನೀವು ಪ್ರಧಾನಿಗಿರಬೇಕು ಎಂದು ರಾಂಪಾಲ್ ಕಶ್ಯಪ್ ಉತ್ತರಿಸಿದ್ದಾರೆ.
ನಂತರ ಮೋದಿ ಅವರು, ಬೂದು ಬಣ್ಣದ ಸ್ಪೋರ್ಟ್ಸ್ ಶೂಗಳನ್ನು ಅವರಿಗೆ ನೀಡಿದ್ದಾರೆ. 'ಹೊಸ ಶೂ ಧರಿಸಲು ನಿಮಗೆ ಆರಾಮದಾಯಕವೆನಿಸುತ್ತಿದೆಯೇ ಎಂದು ಪ್ರಶ್ನಿಸಿದ ಪ್ರಧಾನಿ, ನಂತರ ಅವರ ಭುಜ ತಟ್ಟಿ, ನಿಯಮಿತವಾಗಿ ಶೂಗಳನ್ನು ಧರಿಸುತ್ತಲೇ ಇರಿ. ಭವಿಷ್ಯದಲ್ಲಿ ಈ ರೀತಿಯ ಪ್ರತಿಜ್ಞೆ ಮಾಡಬೇಡಿ' ಎಂದು ಸಲಹೆ ನೀಡಿದ್ದಾರೆ.
ಶಪಥ ಅಂತ್ಯಗೊಳಿಸಿದ ರಾಂಪಾಲ್ ಕಶ್ಯಪ್ ಜೊತೆ ಮೋದಿ ಕೆಲ ಹೊತ್ತು ಮಾತನಾಡಿದ್ದಾರೆ. ಇಷ್ಟೇ ಅಲ್ಲ ಶಪಥ ನೀವು ಕೆಲಸದ ಮೂಲಕ ಮಾಡಬೇಕು. ಅಭಿವೃದ್ಧಿಗಾಗಿ, ನಿಮ್ಮ ಶ್ರೇಯೋಭಿವೃದ್ದಿಗಾಗಿ, ಪ್ರಗತಿಗಾಗಿ ಮಾಡಬೇಕು. ಈ ರೀತಿಯ ಕಠಿಣ ಶಪಥಗಳಿಂದ ದೇಹವನ್ನು ದಂಡಿಸಬಾರದು ಎಂದು ಮೋದಿ ಮನವಿ ಮಾಡಿದ್ದಾರೆ. ಮೋದಿ ಮುಂದೆ ಮತ್ತೆ ಈ ರೀತಿ ಶಪಥ ಮಾಡುವುದಿಲ್ಲ ಎಂದು ರಾಂಪಾಲ್ ಕಶ್ಯಪ್ ಮಾತುಕೊಟ್ಟಿದ್ದಾರೆ.