ಒಡಿಶಾ: ಆಸ್ಟ್ರೇಲಿಯಾದ ಕ್ರೈಸ್ತ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೇನ್ಸ್ ಹಾಗೂ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರರನ್ನು ಹತ್ಯೆ ಮಾಡಿದ ಅಪರಾಧಿ ದಾರಾ ಸಿಂಗ್ ಅವರ ಸಹಚರ ಮಹೇಂದ್ರ ಹೆಂಬ್ರಾಮ್ 25 ವರ್ಷಗಳ ಶಿಕ್ಷೆಯ ನಂತರ ಬುಧವಾರ ಒಡಿಶಾದ ಕಿಯೋಂಜಾರ್ ಜೈಲಿನಿಂದ ಬಿಡುಗಡೆಯಾದರು.
ಸೆರೆವಾಸದ ವೇಳೆ ತೋರಿದ ಉತ್ತಮ ನಡವಳಿಕೆಯ ಆಧಾರದ ಮೇಲೆ ಈಗ 50 ವರ್ಷ ಆಗಿರುವ ಹೆಂಬ್ರಾಮ್ ಜೈಲಿನಿಂದ ಬಿಡುಗಡೆಗೊಂಡರು.
"ರಾಜ್ಯ ಶಿಕ್ಷೆ ಪರಿಶೀಲನಾ ಮಂಡಳಿಯ ನಿರ್ಧಾರದ ಮೇರೆಗೆ ಹೆಂಬ್ರಾಮ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ನಿರ್ದೇಶನಾಲಯ ಪತ್ರದಲ್ಲಿ ತಿಳಿಸಿದೆ. 25 ವರ್ಷಗಳ ನಂತರ ನಿಯಮಗಳಿಗೆ ಅನುಸಾರವಾಗಿ ಉತ್ತಮ ನಡವಳಿಕೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಜೈಲರ್ ಮನಸ್ವಿನಿ ನಾಯ್ಕ್ ಹೇಳಿದ್ದಾರೆ.
ಹೆಂಬ್ರಾಮ್‌ಗೆ ಬ್ಯಾಂಕ್ ಪಾಸ್‌ಬುಕ್ ಹಸ್ತಾಂತರಿಸಲಾಗಿದೆ. ಅದರಲ್ಲಿ ಅವರು ಜೈಲಿನಲ್ಲಿದ್ದಾಗ ಗಳಿಸಿದ ಹಣವನ್ನು ಠೇವಣಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಘಟನೆಯಲ್ಲಿ ತಪ್ಪಾಗಿ ಸಿಲುಕಿಸಿ ನಾನು 25 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದು, ಇಂದು ಬಿಡುಗಡೆಯಾಗಿದ್ದೇನೆ ಎಂದು ಹೆಂಬ್ರಾಮ್ ಜೈಲಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ಜನವರಿ 21, 1999 ರಂದು ಕಿಯೊಂಜಾರ್ ಜಿಲ್ಲೆಯ ಮನೋಹರ್ ಪುರ ಗ್ರಾಮದಲ್ಲಿ ಚರ್ಚ್ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನದಲ್ಲಿ ಮಲಗಿದ್ದಾಗ ಸ್ಟೇನ್ಸ್ ಹಾಗೂ ಅವರ ಪುತ್ರರಾದ ಫಿಲಿಪ್ (10) ಮತ್ತು ತಿಮೋತಿ (6) ಅವರನ್ನು ಕ್ರೂರವಾಗಿ ಹತ್ಯೆಗೈದ ಆರೋಪದಲ್ಲಿ ಹೆಂಬ್ರಾಮ್ ಮತ್ತು ದಾರಾ ಸಿಂಗ್, ಅಲಿಯಾಸ್ ರವೀಂದ್ರ ಪಾಲ್ ಸಿಂಗ್ ಅವರನ್ನು ದೋಷಿಗಳೆಂದು ಘೋಷಿಸಲಾಗಿತ್ತು.