ನವದೆಹಲಿ: 1961 ರ ಚುನಾವಣಾ ನಿಯಮಗಳಿಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸುಪ್ರೀಂ ಕೋರ್ಟ್ ಗುರುವಾರ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ.
ಜೈರಾಮ್ ರಮೇಶ್ ಅವರ ಮನವಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ, ಜನವರಿ 15 ರಂದು ಕೇಂದ್ರ ಮತ್ತು ಚುನಾವಣಾ ಸಮಿತಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೋರಿತ್ತು.
ಚುನಾವಣಾ ಆಯೋಗದ ಪರವಾಗಿ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್, ಉತ್ತರ ಸಲ್ಲಿಸಲು ಇನ್ನೂ ಮೂರು ವಾರಗಳ ಕಾಲಾವಕಾಶ ಕೋರಿದ್ದರು.
ಸಿಂಗ್ ಅವರ ಮನವಿಯನ್ನು ಪುರಸ್ಕರಿಸಿದ ಪೀಠ, ಕಾಲಾವಕಾಶ ನೀಡಿದೆ ಮತ್ತು ಜುಲೈ 21 ರ ವಾರವನ್ನು ವಿಚಾರಣೆಗೆ ನಿಗದಿಪಡಿಸಿದೆ. ರಮೇಶ್ ಅವರನ್ನು ಹೊರತುಪಡಿಸಿ, ಶ್ಯಾಮ್ ಲಾಲ್ ಪಾಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸಲ್ಲಿಸಿದ ಎರಡು ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ, ಜೈರಾಮ್ ರಮೇಶ್ ಅವರ ಪರ ವಾದ ಮಂಡಿಸಿದರು.
1961ರ ಚುನಾವಣಾ ನೀತಿ ನಿಯಮಗಳಿಗೆ "ಅತ್ಯಂತ ಬುದ್ಧಿವಂತಿಕೆಯಿಂದ" ತಿದ್ದುಪಡಿ ಮಾಡಲಾಗಿದೆ ಮತ್ತು ಮತಗಟ್ಟೆಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.