ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ.
ಈ ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಈ ಹೇಯ ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
"ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಈ ಹೇಯ ಕೃತ್ಯದ ಹಿಂದಿರುವ ಉಗ್ರರನ್ನು ಸುಮ್ಮನೆ ಬಿಡಲ್ಲ. ಅವರ ದುಷ್ಟ ಅಜೆಂಡಾ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದಿದ್ದಾರೆ.
ಅಮಾಯಕ ನಾಗರಿಕರ ಮೇಲಿನ ದಾಳಿ ಹೇಡಿತನ ಮತ್ತು ಅತ್ಯಂತ ಖಂಡನೀಯವಾದದ್ದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಪೊಳ್ಳು ಹೇಳಿಕೆ ನೀಡುವ ಬದಲು, ಸರ್ಕಾರ ವಿಷ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಸಂಭವಿಸದಂತೆ ಮತ್ತು ಅಮಾಯಕ ಭಾರತೀಯರು ಈ ರೀತಿ ಪ್ರಾಣ ಕಳೆದುಕೊಳ್ಳದಂತೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.