ಒಮರ್ ಅಬ್ದುಲ್ಲಾ 
ದೇಶ

Pahalgam Terror: 'ನಾನೇ ಪ್ರವಾಸಿಗರನ್ನು ಆಹ್ವಾನಿಸಿದ್ದು, ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ'; Omar Abdullah ಪವರ್ ಫುಲ್ ಭಾಷಣ

ಬಂದೂಕುಗಳಿಂದ ಭಯೋತ್ಪಾದನೆಯನ್ನು ನಿಯಂತ್ರಿಸಬಹುದೇ ಹೊರತು ಅದನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಜನರು ನಮ್ಮೊಂದಿಗಿರುವಾಗ ಮಾತ್ರ ಅದು ಕೊನೆಗೊಳ್ಳುತ್ತದೆ.

ಶ್ರೀನಗರ: ಕಾಶ್ಮೀರಕ್ಕೆ ನಾನೇ ಪ್ರವಾಸಿಗರ ಆಹ್ವಾನಿಸಿದ್ದೆ.. ಆದರೆ ಅವರಿಗೆ ಸೂಕ್ತ ರಕ್ಷಣೆ ನೀಡಲಾಗಲಿಲ್ಲ. ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ವಿಶೇಷ ಅಧಿವೇಶನದ ವೇಳೆ ಉಪ ಮುಖ್ಯಮಂತ್ರಿ ಸುರೀಂದರ್‌ ಚೌಧರಿ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಗುಂಡಿನ ದಾಳಿಯಲ್ಲಿ ಮೃತಪಟ್ಟ 26 ಮಂದಿಯ ಗೌರವಾರ್ಥವಾಗಿ ಅಧಿವೇಶನದ ಆರಂಭದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಉಗ್ರ ದಾಳಿ ವಿರುದ್ಧ ಅವಿರೋಧ ನಿರ್ಣಯ

ಭಯೋತ್ಪಾದನಾ ದಾಳಿಯನ್ನು ಖಂಡಿಸುವ ನಿರ್ಣಯ ಕೈಗೊಳ್ಳಲಾಗಿದ್ದು, 'ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯು ತನ್ನ ಎಲ್ಲಾ ನಾಗರಿಕರಿಗೆ ಶಾಂತಿ, ಅಭಿವೃದ್ಧಿ ಮತ್ತು ಸಮಗ್ರ ಸಮೃದ್ಧಿಯ ವಾತಾವರಣವನ್ನುಕಲ್ಪಿಸುವ ಹಾಗೂ ರಾಷ್ಟ್ರದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸಾಮರಸ್ಯವನ್ನು ಕದಡುವ, ಪ್ರಗತಿಗೆ ಅಡ್ಡಿಪಡಿಸುವ ದುಷ್ಟ ಸಂಚುಗಳನ್ನು ಹತ್ತಿಕ್ಕಲು ತನ್ನ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ

ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿಎಂ ಒಮರ್ ಅಬ್ದುಲ್ಲಾ, 'ಪಹಲ್ಗಾಮ್‌ ದಾಳಿ ದಕ್ಷಿಣದಿಂದ ಉತ್ತರದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ, ಅರುಣಾಚಲದಿಂದ ಗುಜರಾತ್‌ ವರೆಗೆ, ಕಾಶ್ಮೀರದಿಂದ ಕೇರಳದವರೆಗೂ ಈ ದಾಳಿಯ ಪರಿಣಾಮ ಉಂಟಾಗಿದೆ. ಪಹಲ್ಗಾಮ್‌ ದಾಳಿಯು ನಮ್ಮೆಲ್ಲ ನಿರೀಕ್ಷೆಗಳನ್ನು ಹಿಮ್ಮೆಟ್ಟಿಸಿದೆ. ಮತ್ತೆ ಯಾವಾಗ ಇಂತಹ ದಾಳಿ ನಡೆಯುವುದೋ ಎಂಬ ಆತಂಕ ಉಂಟಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದವರಲ್ಲಿ ಕ್ಷಮೆ ಕೇಳಲು ನನ್ನಲ್ಲಿ ಪದಗಳೇ ಇಲ್ಲ. ನಾನೇ ಪ್ರವಾಸಿಗರ ಆಹ್ವಾನಿಸಿದ್ದು. ಆದರೆ ಅವರಿಗೆ ಸೂಕ್ತ ರಕ್ಷಣೆ ನೀಡಲಾಗಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಹೊಣೆ ಚುನಾಯಿತ ಸರ್ಕಾರದ್ದಲ್ಲ. ಅದಾಗ್ಯೂ ಮುಖ್ಯಮಂತ್ರಿಯಾಗಿ ವಿಫಲನಾಗಿದ್ದೇನೆ ಎಂದು ಒಮರ್ ಅಬ್ದುಲ್ಲಾ ಹೇಳಿದರು.

ಮುಖ್ಯಮಂತ್ರಿಯಾಗಿ, ಪ್ರವಾಸೋದ್ಯಮ ಸಚಿವನಾಗಿ, ನಾನೇ ಪ್ರವಾಸಿಗರನ್ನು ಇಲ್ಲಿಗೆ ಸ್ವಾಗತಿಸಿದೆ. ಆತಿಥೇಯನಾಗಿ, ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು. ಆದರೆ ಅದು ನನಗೆ ಸಾಧ್ಯವಾಗಲಿಲ್ಲ. ಕ್ಷಮೆಯಾಚಿಸಲು ನನ್ನಲ್ಲಿ ಪದಗಳೇ ಇಲ್ಲ. ತಮ್ಮ ತಂದೆ ರಕ್ತದ ಮಡುವಿನಲ್ಲಿರುವುದನ್ನು ನೋಡಿದ ಆ ಮಕ್ಕಳಿಗೆ, ದಿನಗಳ ಹಿಂದೆ ವಿವಾಹವಾದ ಆ ನೌಕಾಪಡೆಯ ಅಧಿಕಾರಿಯ ವಿಧವೆ ಪತ್ನಿಗೆ ನಾನು ಏನು ಹೇಳಲಿ? ಅವರು ನಮ್ಮ ತಪ್ಪು ಏನು ಎಂದು ಕೇಳಿದರು? ಅವರು ಮೊದಲ ಬಾರಿಗೆ ಕಾಶ್ಮೀರಕ್ಕೆ ಬಂದಿದ್ದಾರೆ. ರಜೆಗಾಗಿ ಇಲ್ಲಿಗೆ ಬಂದವುರ ಇದೀಗ ಜೀವಮಾನದಲ್ಲೇ ಮರೆಯದ ಕರಾಳ ನೆನಪುಗಳೊಂದಿಗೆ ಹಿಂತಿರುಗಿದ್ದಾರೆ ಎಂದು ಒಮರ್ ಆಬ್ದುಲ್ಲಾ ಹೇಳಿದರು.

ಕಾಶ್ಮೀರದಲ್ಲಿ ಒಗ್ಗಟ್ಟು ಮೂಡಿದೆ

ಇದೇ ವೇಳೆ ಉಗ್ರ ದಾಳಿಯಂತಹ ಅಮಾನವೀಯ ಕೃತ್ಯದ ಹೊರತಾಗಿಯೂ ಕಾಶ್ಮೀರದಲ್ಲಿ ಭರವಸೆಯೊಂದು ಮೂಡಿದೆ ಎಂದು ಹೇಳಿದ ಒಮರ್ ಅಬ್ದುಲ್ಲಾ, 'ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಗ್ಗಟ್ಟಿನ ಪ್ರತಿಭಟನೆಗಳು ನಡೆದಿವೆ. ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ಅವನ್ನೆಲ್ಲ ಆಯೋಜಿಸಿರಲಿಲ್ಲ. ಆಕ್ರೋಶ ಮತ್ತು ದುಃಖ ಜನರ ಹೃದಯದಿಂದ ನೇರವಾಗಿ ವ್ಯಕ್ತವಾಗಿದೆ. ಎಲ್ಲ ಮಸೀದಿಗಳಲ್ಲಿ ಮೌನಾಚರಣೆ ನಡೆಸಲಾಗಿದೆ. ಈ ಬದಲಾವಣೆಯನ್ನು ಬೆಂಬಲಿಸಬೇಕು ಹಾಗೂ ಬಲಪಡಿಸಬೇಕು. ಜನರಲ್ಲಿ ತಾನಾಗಿಯೇ ಮೂಡಿರುವ ಒಗ್ಗಟ್ಟಿನ ಮನೋಭಾವ, ಸಹಾನುಭೂತಿ ಮತ್ತು ಸ್ಥಿತಿಸ್ಥಾಪಕ ಗುಣವನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಭಯೋತ್ಪಾದನೆಗೆ ಅಂತ್ಯ ಹಾಡುವ ಸಮಯ

ಇದೇ ವೇಳೆ ಈ ದಾಳಿಯ ವಿರುದ್ಧ ಇಡೀ ಕಾಶ್ಮೀರ ಒಗ್ಗಟ್ಟಾಗಿದ್ದು, ಇದು ಕಣಿವೆಯಲ್ಲಿ "ಭಯೋತ್ಪಾದನೆಯ ಅಂತ್ಯದ ಆರಂಭ" ವನ್ನು ಗುರುತಿಸಬಹುದು ಎಂದು ಅವರು ಹೇಳಿದರು. "ದುರದೃಷ್ಟವಶಾತ್, ಮುಂದಿನ ದಾಳಿ ಎಲ್ಲಿ ನಡೆಯುತ್ತದೆ ಎಂದು ನಾವು ಭಾವಿಸುವಾಗ ಬೈಸರನ್ ನಲ್ಲಿ ಉಗ್ರರು ಅದೇ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ನಾವು ಈ ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದಾಗ ನಾನು ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಇದ್ದೆ. ಸಂತ್ರಸ್ಥ ಕುಟುಂಬಗಳಿಗೆ ಕ್ಷಮೆಯಾಚಿಸಲು ನನ್ನಲ್ಲಿ ಪದಗಳೇ ಇರಲಿಲ್ಲ" ಎಂದು ಹೇಳಿದರು.

ಬಂದೂಕಿಂದ ಭಯೋತ್ಪಾದನೆ ಅಳಿಸಲು ಸಾಧ್ಯವಿಲ್ಲ

"ನಾವು ಜಾಗರೂಕರಾಗಿರಬೇಕು, ಜನರನ್ನು ನಮ್ಮಿಂದ ದೂರ ಹೋಗುವ ಯಾವುದನ್ನೂ ಮಾಡಬಾರದು. ಈ ಸ್ವಯಂಪ್ರೇರಿತ ಪ್ರತಿಭಟನೆಗೆ ಹಾನಿ ಮಾಡುವ ಯಾವುದೇ ಕ್ರಮವನ್ನು ನಾವು ತೆಗೆದುಕೊಳ್ಳಬಾರದು. ನಾವು ಬಂದೂಕುಗಳಿಂದ ಭಯೋತ್ಪಾದನೆಯನ್ನು ನಿಯಂತ್ರಿಸಬಹುದೇ ಹೊರತು ಅದನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಜನರು ನಮ್ಮೊಂದಿಗಿರುವಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಇಂದು ಜನರು ಅಲ್ಲಿಗೆ ತಲುಪುತ್ತಿರುವಂತೆ ತೋರುತ್ತಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT