ಪಾಟ್ನಾ: ಬಿಹಾರದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ(SIR)ಯ ಮೊದಲ ಹಂತ ಪೂರ್ಣಗೊಂಡ ನಂತರ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ನನ್ನ ಹೆಸರು ತೆಗೆದುಹಾಕಲಾಗಿದೆ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಶನಿವಾರ ಹೇಳಿದ್ದಾರೆ.
ಆದಾಗ್ಯೂ, ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿರುವ ತೇಜಸ್ವಿ ಯಾದವ್ ಅವರ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಆರೋಪವನ್ನು ನಿರಾಕರಿಸಿದೆ ಮತ್ತು ಇದು "ಚೇಷ್ಟೆಯ ಕೆಲಸ" ಎಂದು ಕಿಡಿ ಕಾರಿದೆ.
ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ಎಣಿಕೆ ಫಾರ್ಮ್ ಅನ್ನು ಭರ್ತಿ ಮಾಡಿದ್ದೇನೆ ಎಂದು ಹೇಳಿದರು.
"ನನ್ನ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಹೇಗೆ ಸಾಧ್ಯ?" ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದರು.
ಎಪಿಕ್ ಸಂಖ್ಯೆಯ ಮೂಲಕ ತಮ್ಮ ಹೆಸರನ್ನು ಹುಡುಕಿದ ನಂತರ ಯಾವುದೇ ಡೇಟಾ ಕಂಡುಬಂದಿಲ್ಲ ಎಂದು ಅವರು ಬಿಹಾರ ಪ್ರತಿಪಕ್ಷ ನಾಯಕ ಆರೋಪಿಸಿದ್ದಾರೆ.
ಯಾದವ್ ಅವರ ಹೇಳಿಕೆಯ ನಂತರ, ಚುನಾವಣಾ ಆಯೋಗವು ಅವರ ವಿವರಗಳನ್ನು ಒಳಗೊಂಡ ಮತದಾರರ ಪಟ್ಟಿಯ ಪ್ರತಿಯನ್ನು ಬಿಡುಗಡೆ ಮಾಡಿದೆ. ಪಾಟ್ನಾದ ಪಶುವೈದ್ಯಕೀಯ ಕಾಲೇಜಿನ ಬೂತ್‌ನ ಮತದಾರರ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರು ಇದೆ ಎಂದು ಆಯೋಗ ದೃಢಪಡಿಸಿದೆ.
"ತೇಜಸ್ವಿ ಯಾದವ್ ಅವರು ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ದುರುದ್ದೇಶಪೂರಿತ ಹೇಳಿಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 416 ರಲ್ಲಿ ಇದೆ. ಆದ್ದರಿಂದ, ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಲಾಗಿಲ್ಲ ಎಂದು ಹೇಳುವ ಯಾವುದೇ ಹಕ್ಕು ಅವರಿಗೆ ಇಲ್ಲ ಮತ್ತು ವಾಸ್ತವಿಕವಾಗಿ ಅದು ತಪ್ಪು" ಎಂದು ಆಯೋಗ ಹೇಳಿದೆ.
ಆದಾಗ್ಯೂ, ಚುನಾವಣಾ ಆಯೋಗ ಒದಗಿಸಿದ EPIC ಸಂಖ್ಯೆಯು ತೇಜಸ್ವಿ ಯಾದವ್ ಹಂಚಿಕೊಂಡ EPIC ಸಂಖ್ಯೆಗಿಂತ ಭಿನ್ನವಾಗಿದೆ.