ಗುಂಟೂರು: ಗ್ರಾನೈಟ್ ಕ್ವಾರಿಯಲ್ಲಿ ಬಂಡೆಗಳು ಕುಸಿದು ಬಿದ್ದ ಪರಿಣಾಮ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಇತರ 10 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಬಾಪಟ್ಲಾ ಜಿಲ್ಲೆಯ ಬಳ್ಳಿಕುರವ ಬಳಿ ಭಾನುವಾರ ನಡೆದಿದೆ.
ರಕ್ಷಣಾ ತಂಡಗಳು ಇದುವರೆಗೆ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವ ಉಳಿದ ಇಬ್ಬರನ್ನು ಹೊರತರುವ ಪ್ರಯತ್ನಗಳು ನಡೆಯುತ್ತಿವೆ. ಘಟನೆ ವೇಳೆ 16 ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಗಾಯಾಳುಗಳನ್ನು ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕ್ವಾರಿ ನಿರ್ವಹಣೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸುವಲ್ಲಿ ವಿಫಲವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಬಾಪಟ್ಲಾ ಜಿಲ್ಲಾಧಿಕಾರಿ ಜೆ. ವೆಂಕಟ ಮುರಳಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದುಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಮೃತರನ್ನು ಒಡಿಶಾ ಮೂಲದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಿಂದ ವಿವರವಾದ ವರದಿ ಕೇಳಿದ್ದು ಗಾಯಾಳುಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಖಾತ್ರಿಗೆ ಸೂಚಿಸಿದ್ದಾರೆ. ಅಪಘಾತದ ಕಾರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.