ಶ್ರೀನಗರ: ಭದ್ರತಾ ಪಡೆಗಳ 'ಆಪರೇಷನ್ ಅಖಾಲ್' ಮುಂದುವರೆದಿದ್ದು, ಮೂರನೇ ದಿನದಲ್ಲಿ ಇನ್ನೂ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇದರೊಂದಿಗೆ ಇದುವರೆಗಿನ ಈ ಕಾರ್ಯಾಚರಣೆಯಲ್ಲಿ ಒಟ್ಟು ಆರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅತಿದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾದ ಈ ಕಾರ್ಯಾಚರಣೆಯನ್ನು 'ಆಪರೇಷನ್ ಮಹಾದೇವ್' ಮತ್ತು 'ಆಪರೇಷನ್ ಶಿವಶಕ್ತಿ' ನಂತರ ಪ್ರಾರಂಭಿಸಲಾಗಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ (ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್ ಜಂಟಿ ತಂಡ) ಇನ್ನೂ ನಡೆಯುತ್ತಿದೆ. ರಾತ್ರಿಯಿಡೀ ಗುಂಡಿನ ದಾಳಿ ಮತ್ತು ಸ್ಫೋಟಗಳ ಶಬ್ದಗಳು ಕೇಳಿಬಂದವು. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಖಾಲ್ ಕಾಡುಗಳಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಕಾಡಿನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ನಂತರ ಎನ್‌ಕೌಂಟರ್ ಪ್ರಾರಂಭವಾಯಿತು. ಈ ಸಮಯದಲ್ಲಿ ಓರ್ವ ಸೈನಿಕ ಕೂಡ ಗಾಯಗೊಂಡಿದ್ದಾರೆ.
ಇದಕ್ಕೂ ಮೊದಲು, ಶನಿವಾರವೂ ಸಹ, ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದರು. ಅಧಿಕಾರಿಗಳ ಪ್ರಕಾರ, ಈ ಭಯೋತ್ಪಾದಕರು ನಿಷೇಧಿತ ಸಂಘಟನೆ ಲಷ್ಕರ್-ಎ-ತೈಬಾ (LeT) ಗೆ ಸಂಬಂಧಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಗೆ ಸೇರಿದವರು. 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು TRF ಹೊತ್ತುಕೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು ಮತ್ತು ವಿಶೇಷ ಅರೆಸೈನಿಕ ಪಡೆಗಳನ್ನು ಬಳಸಲಾಗುತ್ತಿದೆ. ಡಿಜಿಪಿ ಮತ್ತು 15 ಕಾರ್ಪ್ಸ್ ಕಮಾಂಡರ್ ಸ್ವತಃ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.